ಕಾಡುಹಂದಿಗಳ ಕಾಟಕ್ಕೆ ಹೈರಾಣಾದ ಬದನವಾಳು ಮಂದಿ
ಮೈಸೂರು, ಏಪ್ರಿಲ್ 3: ಮೈಸೂರಿನ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಕಾಡುಹಂದಿಯೊಂದು ರಂಗಸ್ವಾಮಿ ಎಂಬುವವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ರಂಗಸ್ವಾಮಿಗೆ ತೊಡೆಯ ಭಾಗಕ್ಕೆ ತೀವ್ರತರವಾದ ಪೆಟ್ಟು ಬಿದ್ದಿದ್ದು, ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇವರು ಕುರಿ ಮೇಯಿಸಲು ತೆರಳಿದ್ದ ವೇಳೆ ಕಾಡುಹಂದಿಯೊಂದು ಗುದ್ದಿ ಎಳೆದಾಡಿದೆ. ಅಲ್ಲದೇ, ದವಡೆಗಳ ಮೂಲಕ ತೊಡೆಯ ಭಾಗಕ್ಕೆ ತಿವಿದು ಗಾಯಗೊಳಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಡುಹಂದಿಗಳ ಕಾಟ ವಿಪರೀತವಾಗಿದೆ.
500ಕ್ಕೂ ಹೆಚ್ಚಿನ ಕಾಡುಹಂದಿಗಳು ಸುತ್ತಮುತ್ತ ಓಡಾಡುತ್ತಿದ್ದು, ಬೆಳೆಗಳನ್ನು ನಾಶಪಡಿಸುತ್ತಿವೆ ಎಂದು ಬದನವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಮಹೇಶ್ ದೂರಿದ್ದಾರೆ.

ಗ್ರಾಮದ ಸಮೀಪ ಇರುವ ಹಲಸಿನಕೆರೆ ಬಳಿ ಮುಳ್ಳುಗಂಟಿ ಗಿಡಗಳು ಬೆಳೆದುಕೊಂಡಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂದಿಗಳಿವೆ. ಇದರ ಜತೆಗೆ, ನೇರಳೆ ಗೇಟ್ ಸಮೀಪವೂ ಕುರುಚಲು ಕಾಡಿದ್ದು ಅಲ್ಲೂ ಇವೆ. ಹಗಲಿನ ವೇಳೆಯೂ ಇವು ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಡಿಕ್ಕಿಯಾಗುತ್ತವೆ. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ.
ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುವ ಹೆಚ್ಚಿನ ವಾಹನಗಳಿಗೆ ವಿಮೆ ಹಾಗೂ ಇತರೆ ದಾಖಲಾತಿಗಳು ಇಲ್ಲದಿರುವುದರಿಂದ ಪೊಲೀಸರಿಗೆ ದೂರು ನೀಡುವುದಿಲ್ಲ. ಬೇರೆಲ್ಲೋ ಪೆಟ್ಟಾಗಿದೆ ಎಂದು ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಾರೆ. ಜತೆಗೆ, ನೂರಕ್ಕೂ ಅಧಿಕ ಸೀಳುನಾಯಿಗಳಿದ್ದು, ಅವು ಕುರಿಗಳನ್ನು ತಿಂದು ಹಾಕುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.












Click it and Unblock the Notifications