ಪ್ರೀತಿ ನಿರಾಕರಣೆ: ವಿವಾಹಿತನಿಗೆ ಥಳಿಸಿದ ಯುವತಿ ಮಾವಂದಿರು
ಮೈಸೂರು, ನವೆಂಬರ್. 05: ಪ್ರೀತಿಸಿ ವಿವಾಹವಾದವರನ್ನು ಬೇರ್ಪಡಿಸುವುದು ಸಾಮಾನ್ಯವಾಗಿ ಕೇಳಿರುವ ವಿಚಾರ. ಆದರೆ, ಪ್ರೀತಿಸುವುದಕ್ಕೆ ನಿರಾಕರಿಸಿದ ಯುವಕನ ಮೇಲೆ ಯುವತಿಯ ಮಾವಂದಿರು ಮನಸೋಇಚ್ಛೆ ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಸಂಬಂಧ ಹಲ್ಲೆಗೊಳಗಾದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ನಗರದ ಕೆಆರ್ ಮೊಹಲ್ಲಾ ನಿವಾಸಿ ಗೌಸ್ ಪೀರ್ ಎಂಬಾತನೇ ಹಲ್ಲೆಗೊಳಗಾದವನು. ಅದೇ ಮೊಹಲ್ಲಾದ ಸಲೀಂ, ಇಮ್ರಾನ್, ಮುಬಾರಕ್ ಹಾಗೂ ಸಾಬು ಎಂಬುವವರು ಗೌಸ್ ಪೀರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಗೌಸ್ ಪೀರ್ ಗೆ ಮದುವೆಯಾಗಿದೆ. ಆತನ ಎದುರಿನ ಮನೆಯಲ್ಲಿ ವಾಸವಿದ್ದ ಯುವತಿಯೊಬ್ಬಳು ಗೌಸ್ ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ ಆಕೆಯ ಪ್ರೀತಿಯನ್ನು ಗೌಸ್ ನಿರಾಕರಿಸಿದ್ದಾನೆ. "ನಾನು ವಿವಾಹವಾಗಿದ್ದು, ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾನೆ.

ಆತನನ್ನು ವಿವಾಹವಾಗಲು ಇಚ್ಛಿಸಿದ್ದ ಆಕೆ ತನ್ನ ಮಾವಂದಿರಿಗೆ ಪ್ರೀತಿಸುವ ವಿಷಯ ತಿಳಿಸಿದ್ದಾಳೆ. ಹೀಗಾಗಿ ಅವರುಗಳು ಗೌಸ್ ನನ್ನು ವರುಣ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ನಂತರ ಆತನನ್ನು ಅರೆಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಅವರುಗಳು ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ. ಇಷ್ಟಾದರೂ ಆತ ವಿವಾಹಕ್ಕೆ ಒಪ್ಪದ ಹಿನ್ನೆಲೆಯಲ್ಲಿ ತೋಟದ ಮನೆಯಲ್ಲಿರುವ ಗಂಧದ ಮರ ಕಳವು ಮಾಡಲು ಬಂದಿರುವುದಾಗಿ ಹೇಳುವಂತೆ ಒತ್ತಡ ಹೇರುವ ಮೂಲಕ ಆತನನ್ನು ಕಳ್ಳ ಎಂದು ಬಿಂಬಿಸಲು ಹೊರಟಿದ್ದಾರೆ.
ಇಷ್ಟೆಲ್ಲಾ ನಡೆದರೂ ಗೌಸ್ ಮಾತ್ರ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ಅನ್ಯ ದಾರಿ ಇಲ್ಲದೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ಆತ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾನೆ. ಆದರೆ ಸತ್ಯಾಸತ್ಯತೆ ತಿಳಿದ ನಂತರ ದೂರು ದಾಖಲಿಸಿಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.
ಅನ್ಯ ದಾರಿ ಕಾಣದ ಆತ ಮಾಧ್ಯಮಗಳ ಮೊರೆ ಹೋಗಿದ್ದಾನೆ. ಈ ಸಂಬಂಧ ಸುದ್ದಿ ಬಿತ್ತರವಾಗುತ್ತಿದ್ದಂತೆ ಘಟನೆ ನಡೆದ ಸ್ಥಳಕ್ಕೆ ವರುಣ ಠಾಣೆ ಪೊಲೀಸರು ನಾಲ್ವರ
ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications