ಹೆಚ್‌ಡಿಕೋಟೆ: ಮಾಜಿ ಶಾಸಕರ ಜಮೀನಿನಲ್ಲಿ ಬೃಹತ್ ಗಂಡು ಚಿರತೆ ಸೆರೆ
ಮೈಸೂರು, ಅಕ್ಟೋಬರ್ 30: ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ಪಟ್ಟಣದ ಸಮೀಪ ಇರುವ ಮಾಜಿ ಶಾಸಕ ಎನ್.ನಾಗರಾಜು ಅವರಿಗೆ ಸೇರಿದ ಜಮೀನಿನ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 7 ವರ್ಷದ ಬೃಹತ್ ಗಂಡು ಚಿರತೆ ಸೆರೆ ಸಿಕ್ಕಿದೆ. ಈ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಟ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ಹೆಚ್‌ಡಿ ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್‌ಗೆ ಹೊಂದಿಕೊಂಡಂತೆ ಇರುವ ಜಮೀನಿನ ರೈತರಾದ ದಶರಥ, ಎನ್.ನಾಗರಾಜು, ವಿವೇಕ, ಗುರುಮಲ್ಲು, ಸಣ್ಣಪ್ಪ, ಸೋಮಣ್ಣ, ಸಣ್ಣಯ್ಯರ ಜಮೀನುಗಳಲ್ಲಿ ಕಳೆದ ಒಂದು ತಿಂಗಳ ಒಳಗೆ ನೂರು ಅಡಿಗಳ ಅಂತರದಲ್ಲಿ 4 ಚಿರತೆ ಸೆರೆಯಾಗಿತ್ತು. ಇದೀಗ ಮತ್ತೊಂದು 7 ವರ್ಷದ ಚಿರತೆ ಸೆರೆ ಸಿಕ್ಕಿರುವುದು ಆತಂಕ ಹೆಚ್ಚಿಸಿದೆ.

ಈ ಚಿರತೆಗಳು ಈ ಭಾಗದಲ್ಲಿ ರೈತರ ಹಸು, ಕರು ಮೇಕೆ ಹಾಗೂ ಸಾಕು ನಾಯಿಗಳನ್ನು ತಿಂದು ಹಾಕುತ್ತಿದ್ದವು. ಪ್ರತಿ ಭಾರಿ ಚಿರತೆ ಸಿಕ್ಕಿದ ನಂತರ ಮತ್ತೆ ಜಮೀನುಗಳಲ್ಲಿ ಚಿರತೆ ಓಡಾಟ ರೈತರಿಗೆ ಕಾಣಿಸಿಕೊಳ್ಳುತಿತ್ತು. ಹೀಗಾಗಿ ರೈತರು ಮತ್ತೆ ಬೋನನ್ನು ಜಮೀನಿನಲ್ಲಿ ಇರಿಸುವಂತೆ ಒತ್ತಾಯಿಸುತ್ತಿದ್ದರು. ಪ್ರತಿ ದಿನ ಬೋನಿನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗುತಿತ್ತು. ನಾಯಿಯ ವಾಸನೆ ಹಿಡಿದು ಬಂದ ಚಿರತೆ ಸದ್ಯ ಬೋನಿನಲ್ಲಿ ಸೆರೆಯಾಗಿದೆ.
ಹೆಚ್‌ಡಿ ಕೋಟೆ ತಾಲೂಕಿನಲ್ಲಿ ಈ ಹಿಂದೆ ಜಮೀನುಗಳಲ್ಲಿ ಒಂದರಿಂದ ಎರಡು ಚಿರತೆಗಳು ಕಂಡು ಬರುತ್ತಿದ್ದವು. ಆದರೆ ಈಗ ಒಂದೇ ಸ್ಥಳದಲ್ಲಿ ಇಷ್ಟೊಂದು ಚಿರತೆ ಕಂಡು ಬಂದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇನ್ನು ಚಿರತೆಗಳು ವಾಸವಾಗಲು ಜಮೀನುಗಳ ನಡುವೆ ಹೆಬ್ಬಳ ಜಲಾಶಯ ಸುತ್ತ ಗಿಡ ಮರಗಳು ಕಾರಣವಾಗಿದೆ.

ಚಿರತೆಗಳು ಸರಣಿ ರೀತಿಯಲ್ಲಿ ಬೋನಿಗೆ ಬೀಳುತಿದ್ದು, ಸೆರೆಯಾದ ಚಿರತೆಯನ್ನು ಸಮೀಪದ ಕಾಡಿನಲ್ಲಿ ಬಿಡುತ್ತಿರುವುದರಿಂದ ಮತ್ತೆ ಇದೇ ಸ್ಥಳಕ್ಕೆ ಬರುತ್ತಿದೆ ಎಂದು ರೈತರು ಅರಣ್ಯ ಸಿಬ್ದಂದಿಗಳನ್ನು ತರಾಟೆಗೆ ತೆಗೆದುಕೊಂಡು ಸೆರೆಯಾದ ಚಿರತೆಯನ್ನು ದೂರ ಬಿಡುವಂತೆ ಒತ್ತಾಯಿಸಿದರು.
ಈ ಬಗ್ಗೆ ವಲಯಾರಣ್ಯಾಧಿಕಾರಿ ಪೂಜಾ ಮಾತನಾಡಿ, ವೈದ್ಯರು ಚಿರತೆಯ ಆರೋಗ್ಯ ಪರೀಕ್ಷಿಸಿದ ನಂತರ ಕಾಡಿಗೆ ಬಿಡಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪ ವಲಯಾರಣ್ಯಾಧಿಕಾರಿ ಪರಮೇಶ್ ಮತ್ತು ಚಿರತೆ ಕ್ಷಿಪ್ರ ರಕ್ಷಣಾ ಪಡೆ ಸಿಬ್ಬಂದಿ ಉಪಸ್ಥಿತರಿದ್ದರು.












Click it and Unblock the Notifications