ಮೈಸೂರಿನಲ್ಲಿ ಯುವತಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ ಅರೆಸ್ಟ್
ಮೈಸೂರು, ಫೆಬ್ರವರಿ 17 : ಭಗ್ನ ಪ್ರೇಮಿಯೋರ್ವ ತನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ಚಾಕುವಿನಿಂದ ಇರಿದ ಘಟನೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿತ್ತು. ಇದೀಗ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಡಹಗಲೇ ಹುಡುಗಿಗೆ ಚಾಕು ಇರಿದು ಪಾಗಲ್ ಪ್ರೇಮಿ ಕೃತ್ಯ ಮೆರೆದಿದ್ದ. ಹಲ್ಲೆಗೊಳಗಾದ ವಿದ್ಯಾರ್ಥಿನಿ ಕುವೆಂಪು ನಗರ ನಿವಾಸಿ ಮೇಘನಾ. ಈಕೆಯ ಜೊತೆ ಇದ್ದ ಚಂದನಾ ಎನ್ನುವವರಿಗೂ ಚಾಕುವಿನಿಂದ ಇರಿದಿದ್ದ. ಇವರಿಬ್ಬರು ಯುವರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.
ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ರೋಹಿತ್ ಎಂಬಾತನೇ ಮೇಘನಾಳಿಗೆ ಪ್ರೀತಿಸುವಂತೆ ಹಲವಾರು ದಿನಗಳಿಂದ ಪೀಡಿಸುತ್ತಿದ್ದ. ಆದರೆ ಆಕೆ ಪ್ರೀತಿಯನ್ನು ನಿರಾಕರಿಸಿದ್ದಳು. ಇಂದು ಮಧ್ಯಾಹ್ನ ನಿನ್ನ ಜೊತೆ ಮಾತನಾಡುವುದಿದೆ ಬಾ ಎಂದು ಮಹಾರಾಜ ಕಾಲೇಜು ಮೈದಾನಕ್ಕೆ ಕರೆದೊಯ್ದಿದ್ದಾನೆ.

ಆಕೆಯ ಜೊತೆ ಆಕೆಯ ಸ್ನೇಹಿತೆ ಚಂದನಾ ಕೂಡ ಹೋಗಿದ್ದ ವೇಳೆ ಈ ಕೃತ್ಯ ನಡೆಸಿದ್ದ. ಇದೇ ವೇಳೆ ರೋಹಿತ್ ಅವರಿಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಸಾರ್ವಜನಿಕರು ಈ ಕುರಿತು ಲಕ್ಷ್ಮಿಪುರಂ ಠಾಣೆಯ ಪೊಲೀಸರಿಗೆ ಮಾಹಿತಿ ಪಡೆದು ಇಬ್ಬರು ಯುವತಿಯರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications