Mysuru: ಪ್ರಜಾಪ್ರಭುತ್ವ ದಿನಾಚರಣೆಯಂದು ಮಾನವ ಸರಪಳಿ; ಮೈಸೂರಿನಲ್ಲಿ 60 ಸಾವಿರ ಮಂದಿ ಭಾಗಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ, ಕರ್ನಾಟಕದಲ್ಲಿ ಇಂದು ಬೀದರ್‌ನಿಂದ ಚಾಮರಾಜನಗರದವರೆಗೆ 2,500 ಕಿಮೀ ಉದ್ದದ ಮಾನವ ಸರಪಳಿಯನ್ನು ರಚನೆ ಮಾಡಲಾಗಿತ್ತು. ಸಮಾನತೆ, ಏಕತೆ, ಭ್ರಾತೃತ್ವ ಮತ್ತು ಸಹಭಾಗಿತ್ವದ ಆಡಳಿತದ ಸಂಕೇತವಾಗಿ ಮಾನವ ಸರಪಳಿಯನ್ನು ರಚನೆ ಮಾಡಿದ್ದು, ಕರ್ನಾಟಕ ಸರ್ಕಾರ ವಿಶ್ವ ದಾಖಲೆ ಬರೆದಿದೆ. ಒಟ್ಟು 25 ಲಕ್ಷ ಜನ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾನವ ಸರಪಳಿಯಲ್ಲಿ ಪಾಲ್ಗೊಂಡು, ಸಂವಿಧಾನದ ಪೀಠಿಕೆ ಓದಿದರು. ಸಿಎಂ ನೇತೃತ್ವದಲ್ಲಿ ತೃತೀಯಲಿಂಗಿಗಳು, ವಿಕಲಚೇತನರು ಸೇರಿದಂತೆ ಸಮಾಜದ ವಿವಿಧ ಸ್ತರಗಳ ಜನರು ಮಾನವ ಸರಪಳಿ ರಚಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ನಡೆದಿದ್ದು, ಇದರಲ್ಲಿ ಸಚಿವರು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು, ಸ್ವಯಂ ಸೇವಕಾ ಸಂಘದವರು, ವಿದ್ಯಾರ್ಥಿಗಳು ಭಾಗವಾಗಿದ್ದರು.
ಮೈಸೂರಿನಿಂದ 60,000 ಮಂದಿ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಅತಿ ಉದ್ದದ ಮಾನವ ಸರಪಳಿ ಕಾರ್ಯಕ್ರಮದಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗುವ ಮೂಲಕ ಗಮನ ಸೆಳೆದರು.
ಮೈಸೂರು ಬೆಂಗಳೂರು ರಸ್ತೆಯ ಕಳಸ್ತವಾಡಿ ಗೇಟ್‌ನಿಂದ ಆರಂಭವಾದ ಮಾನವ ಸರಪಳಿ ಮಾರ್ಗವು ಮಣಿಪಾಲ್ ಆಸ್ಪತ್ರೆ, ಫೌಂಟೆನ್ ವೃತ್ತ, ಅಂಬೇಡ್ಕರ್ ವೃತ್ತ, ಪುರ ಭವನ, ಕೋಟೆ ಆಂಜನೇಯ ಸ್ವಾಮಿ ವೃತ್ತಘಿ, ಹಾರ್ಡಿಂಜ್ ವೃತ್ತ, ರೇಸ್ ಕೋರ್ಸ್ ವೃತ್ತ, ಸಂಗೊಳ್ಳಿ ರಾಯಣ್ಣ ಸರ್ಕಲ್, ರಿಂಗ್ ರಸ್ತೆ, ವರುಣ ಗ್ರಾಮ, ಕೆಂಪಯ್ಯನ ಹುಂಡಿ, ಗರ್ಗೆಶ್ವರಿ, ತಿ.ನರಸೀಪುರ ಪಟ್ಟಣ, ಗಂಜಾಂ ನರಸಿಂಹ ಸ್ವಾಮಿ ದೇವಸ್ಥಾನ, ಕುರುಬೂರು, ಮಾಡ್ರಳ್ಳಿ ಗೇಟ್, ಮೂಗೂರು ಗ್ರಾಮದ ಮೂಲಕ ಚಾಮರಾಜನಗರ ಜಿಲ್ಲೆ ಪ್ರವೇಶ ಮಾಡಿತು.
ಶಾಲಾ, ಕಾಲೇಜು ಸಾವಿರಾರು ವಿದ್ಯಾರ್ಥಿಗಳೊಂದಿಗೆ ನಾನಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸರಕಾರಿ ಮತ್ತು ಖಾಸಗಿ ಸಂಸ್ಥೆ ಮತ್ತು ಕೈಗಾರಿಕೆಗಳ ನೌಕರರು ಮತ್ತು ಸಿಬ್ಬಂದಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವ ದಿನವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ತಾಲೀಮು ಮುಗಿಸಿ ಅರಮನೆಗೆ ವಾಪಸಾಗುತ್ತಿದ್ದ ದಸರಾ ಮಹೋತ್ಸವದ 13 ಆನೆಗಳು ಕೂಡ ಸಾಲಿನಲ್ಲಿ ಇದ್ದದ್ದು ವಿಶೇಷವಾಗಿತ್ತು.
ಶಾಸಕ ತನ್ವೀರ್ ಸೇಠ್ ಮಾತನಾಡಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಭಾರತ ಇಂದು ಪ್ರಜಾಪ್ರಭುತ್ವದ ಅತಿ ದೊಡ್ಡ ದೇಶವಾಗಿದೆ. ಇದಕ್ಕೆ ರಾಜ್ಯದ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಿ ಇತಿಹಾಸ ಸೃಷ್ಟಿಸುವುದೇ ಸಾಕ್ಷಿ ಎಂದರು.
ವಿಶ್ವಸಂಸ್ಥೆಯು (UN) 2007ರಲ್ಲಿ ಸೆಪ್ಟೆಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವೆಂದು ಘೋಷಿಸಿತು, ಅಂದಿನಿಂದ ಪ್ರತಿವರ್ಷ ಜಗತ್ತಿನಾದ್ಯಂತ ಇದನ್ನು ಆಚರಿಸಲಾಗುತ್ತದೆ.












Click it and Unblock the Notifications