ಕಳೆದೆರಡು ದಿನಗಳಿಂದ ಮಳೆ, ನಂಜನಗೂಡಿನ ಹೆಡತಲೆ ಗ್ರಾಮ ಜಲಾವೃತ
ಮೈಸೂರು, ಮೇ 29 : ಕಳೆದೆರಡು ದಿನಗಳಿಂದ ಮೈಸೂರು ಹಾಗೂ ನಂಜನಗೂಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಗ್ರಾಮಗಳ ಗುಡಿಸಲಿಗೆ ನೀರು ನುಗ್ಗಿ ಮನೆಗಳು ಕುಸಿದು ಬಿದ್ದಿವೆ.
ಹೆಡತಲೆ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದರೆ 6 ಗುಡಿಸಲುಗಳು ನೆಲಕಚ್ಚಿವೆ. ಮಳೆ ಇಲ್ಲದೆ ಕಂಗೆಟ್ಟಿದ್ದ ಜನತೆ ಮಳೆ ಬಂತು ಎಂದು ನಿಟ್ಟುಸಿರು ಬಿಡುವಾಗಲೇ ಅತಿವೃಷ್ಟಿಯಿಂದ ನೂರಾರು ಜನ ಈಗ ಬೀದಿಗೆ ಬಂದು ನಿಲ್ಲುವಂತಾಗಿದೆ.

ಈ ಗ್ರಾಮಮದಲ್ಲಿ ಹರಿಯುವ ಗುಂಡ್ಲು ನದಿ ಪಾತ್ರದ ಮೇಲ್ಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದ್ದ ಹಲವು ಚೆಕ್‍ಡ್ಯಾಮ್ ಗಳು ಮಳೆ ನೀರಿನ ಪ್ರವಾಹಕ್ಕೆ ಕೊಚ್ಚಿಹೋಗಿವೆ.
ಮಳೆಯಿಂದಾಗಿ ಅನಾಹುತ ಸಂಭವಿಸಿರುವ ವಿಷಯ ತಿಳಿದ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಇಒ ರೇವಣ್ಣ ಮತ್ತು ತಹಸಿಲ್ದಾರ್ ಬಸವರಾಜ್ ಚಿಗರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರು.

ಬಳಿಕ ಪ್ರತಿಕ್ರಿಯಿಸಿದ ಶಾಸಕ ಕಳಲೆ ಕೇಶವಮೂರ್ತಿ, ಗುಂಡ್ಲು ನದಿಗೆ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಿಂದ ಊಟದ ವ್ಯವಸ್ಥೆ ಮತ್ತು ಸರ್ಕಾರಿ ಶಾಲೆಗಳಲ್ಲಿ ತಂಗಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ನಂಜನಗೂಡು ನಗರದಲ್ಲೂ ರಾತ್ರಿಯಿಂದ ಮುಂಜಾನೆಯವರಿಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳೆಲ್ಲಾ ಕೆರೆಯಂತಾಗಿದ್ದವು.












Click it and Unblock the Notifications