100 ಕೆಜಿ ಕಳೆದುಕೊಂಡ ಆಕೆಯೀಗ ಜಗತ್ತಿನ ತೂಕದ ಮಹಿಳೆಯಲ್ಲ!
ಮುಂಬೈ, ಮಾರ್ಚ್ 7: ಆಕೆ ತನ್ನ ಪಾಲಿನ ದಾಖಲೆಯನ್ನು ಕಳೆದುಕೊಂಡು, ನಿರಾಳವಾಗಿದ್ದಾರೆ. ಆಕೆ ಹೆಸರು ಇಮಾನ್ ಅಹ್ಮದ್. ಜಗತ್ತಿನ ತೂಕದ ಮಹಿಳೆ ಎಂಬುದು ಇಮಾನ್ ಅಹ್ಮದ್ ದಾಖಲೆಯಾಗಿತ್ತು. ಕಳೆದ ಮೂರು ವಾರದಿಂದ ತೂಕ ಇಳಿಸುವ ಚಿಕಿತ್ಸೆ ಪಡೆಯುತ್ತಿರುವ ಆಕೆ ನೂರು ಕೆಜಿಗೂ ಹೆಚ್ಚಿನ ತೂಕ ಕಳೆದುಕೊಂಡಿದ್ದಾರೆ. ಹಾಗಿದ್ದರೆ ಆಕೆಯ ಸದ್ಯದ ತೂಕ ಎಷ್ಟು ಅಂತೀರಾ?
ಇಮಾನ್ ಅಹ್ಮದ್ ಈಗಿನ ತೂಕ 380 ಕೆಜಿ. ಇಪ್ಪತ್ತೈದು ವರ್ಷಗಳ ನಂತರ ಆಕೆ ಮೊದಲ ಬಾರಿಗೂ ಯಾರ ಸಹಾಯ ಪಡೆಯದೆ ತನ್ನಷ್ಟಕ್ಕೆ ಕೂರಲು ಸಾಧ್ಯವಾಗುತ್ತಿದೆ. ಆಕೆ ತನ್ನಷ್ಟಕ್ಕೆ ತಾನು ನಿಲ್ಲುವಂತಾಗಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲೇ ಅದೂ ಸಾಧ್ಯವಾಗಬಹುದು. ಆಕೆಯೀಗ ಶಸ್ತ್ರಚಿಕಿತ್ಸೆಗೆ ಸಿದ್ಧರಾಗುತ್ತಿದ್ದಾರೆ.

ದಿನವೊಂದಕ್ಕೆ ಎರಡು ಕೆಜಿಯಂತೆ 25 ದಿನಕ್ಕೆ ಆಕೆಯ 50 ಕೆಜಿ ತೂಕ ಕಡಿಮೆ ಮಾಡಬೇಕು ಎಂದು ಗುರಿ ಇಟ್ಟುಕೊಂಡಿದ್ದೆವು. ಆಶ್ಚರ್ಯ ಏನೆಂದರೆ ಆಕೆ ನೂರು ಕೆಜಿಗೂ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ ಎಂದು ಇಮಾನ್ ಗೆ ಚಿಕಿತ್ಸೆ ನೀಡುತ್ತಿರುವ ಬೇರಿಯಾಟ್ರಿಕ್ ವೈದ್ಯ ಮುಫಜಲ್ ಲಖ್ಡವಾಲಾ ತಿಳಿಸಿದ್ದಾರೆ.[ತೂಕ ಇಳಿಸಲು ಮುಂಬೈಗೆ ಬಂದ 500ಕೆಜಿ ತೂಕದ ಮಹಿಳೆ]
ದ್ರವಾಹಾರದ ಪಥ್ಯ ಹಾಗೂ ಫಿಜಿಯೋ ಥೆರಪಿಯಲ್ಲೇ ಆಕೆ ಇಷ್ಟು ತೂಕ ಇಳಿದಿದ್ದಾರೆ. ಇನ್ನು ಸದ್ಯದಲ್ಲೇ ಬೇರಿಯಾಟ್ರಿಕ್ ಸರ್ಜರಿ ಮಾಡಲಾಗುತ್ತದೆ. ಇಷ್ಟು ದಿನ ಔಷಧ ಸಹಾಯದಿಂದ ಎಷ್ಟು ಸಾಧ್ಯವೋ ಅಷ್ಟು ತೂಕ ಕಡಿಮೆ ಆಗಿದೆ. ಇನ್ನು ಬಾಕಿ ತೂಕ ಇಳಿಕೆಗೆ ಶಸ್ತ್ರಚಿಕಿತ್ಸೆಯೇ ಆಗಬೇಕು ಎಂದು ಅವರು ಹೇಳಿದ್ದಾರೆ.
ಆಕೆಯ ಮೊದಲ ಶಸ್ತ್ರಚಿಕಿತ್ಸೆ ಆದ ನಂತರ ಅಲೆಕ್ಸಾಂಡ್ರಿಯಾಗೆ ವಾಪಸ್ ಕಳಿಸಿ, ನಿಗಾದಲ್ಲಿ ಇರಿಸಲಾಗುತ್ತದೆ. ಆ ನಂತರ ಮುಂದಿನ ಪ್ರಕ್ರಿಯೆಗೆ ಇಮಾನ್ ವಾಪಸ್ ಬರುತ್ತಾರೆ. ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಯವರು ಜನರಿಂದ ಅರವತ್ತು ಲಕ್ಷ ರುಪಾಯಿ ಸಂಗ್ರಹಿಸಿದ್ದಾರೆ.












Click it and Unblock the Notifications