ಸುಶಾಂತ್ ಸಾವಿನ ದಿನ ಕಾಣಿಸಿಕೊಂಡ ಮುಸುಕುಧಾರಿ ಮಹಿಳೆ ಯಾರು?
ಮುಂಬೈ, ಆ. 16: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನದಂದು ಅವರ ಅಪಾರ್ಟ್ಮೆಂಟ್ ಬಳಿ ಸುಳಿದಾಡಿದ ಇಬ್ಬರು ವ್ಯಕ್ತಿಗಳ ಬಗ್ಗೆ ಸಂಶಯ ಮೂಡಿದೆ. ಅದರಲ್ಲೂ ಮುಸುಕುಧಾರಿ ಮಹಿಳೆ ಬಗ್ಗೆ ಹೆಚ್ಚಿನ ಶಂಕೆಯಿದೆ ಎಂದು ರಿಪಬ್ಲಿಕ್ ಟಿವಿ ವಿಡಿಯೋವೊಂದನ್ನು ಬಹಿರಂಗ ಪಡಿಸಿದೆ.
ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ, ಜಾರಿ ನಿರ್ದೇಶಾನಾಲಯ ತನಿಖೆ ನಡೆಸುತ್ತಿದ್ದು, ಈ ವಿಡಿಯೋ ಪ್ರಮುಖ ಸಾಕ್ಷ್ಯದಂತೆ ಬಳಸಲು ರಿಪಬ್ಲಿಕ್ ಟಿವಿ ಕೋರಿದೆ.
ಅಪರಿಚಿತ ಮಹಿಳೆ ಕಪ್ಪು ಬ್ಯಾಗ್ ಹೊಂದಿದ್ದಳು ಸುಶಾಂತ್ ಮನೆ ಪ್ರವೇಶಿಸಿದಳು, ಮತ್ತೊಬ್ಬ ವ್ಯಕ್ತಿ ಕಪ್ಪು ಬ್ಯಾಗ್ ನೊಂದಿಗೆ ಅಪಾರ್ಟ್ಮೆಂಟ್ ಕಟ್ಟಡ ಪ್ರವೇಶಿಸುತ್ತಾನೆ. ಆದರೆ, ಇಬ್ಬರು ವಾಪಸ್ ಬರುವಾಗ ಬ್ಯಾಗ್ ಕೈಯಲ್ಲಿರುವುದಿಲ್ಲ. ಇವರಿಬ್ಬರು ಒಂದು ತಂಡವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಇದು ಸಾಕ್ಷ್ಯನಾಶ ಪಡಿಸಿದ ವಿಡಿಯೋ ಎಂದು ರಿಪಬ್ಲಿಕ್ ಟಿವಿ ಹೇಳಿದೆ.

ಬ್ಯಾಗ್ ಹಿಡಿದು ಬಂದ ಮುಸುಕುಧಾರಿ ಮಹಿಳೆ
ವಿಡಿಯೋ ಮುಂದಿಟ್ಟುಕೊಂಡು ತನಿಖೆ ಮಾಡಿದಾಗ ಆತ ಹೌಸ್ ಮ್ಯಾನೇಜರ್ ದೀಪೇಶ್ ಸಾವಂತ್ ಎಂದು ತಿಳಿದು ಬಂದಿದೆ. ಆದರೆ, ಮುಂಬೈ ಪೊಲೀಸರ ಸಮ್ಮುಖದಲ್ಲಿ ಓರ್ವ ಮಹಿಳೆ ಹೌಸ್ ಮ್ಯಾನೇಜರ್ ಬಳಿ ಮಾತನಾಡುತ್ತಾಳೆ, ಆಕೆ ಕೈಯಲ್ಲಿ ಹೌಸ್ ಮ್ಯಾನೇಜರ್ ಹೊಂದಿದ್ದ ಅದೇ ಬ್ಯಾಗ್ ಇರುತ್ತದೆ. ಕೆಲ ಹೊತ್ತಲ್ಲಿ ಆಕೆ ಅಲ್ಲಿಂದ ಕಣ್ಮರೆಯಾಗುತ್ತಾಳೆ. ಈ ಕುರಿತಂತೆ ಮೂರು ವಿಡಿಯೋಗಳನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಇಂದು ಮೊಂಟ್ ಬ್ಲಾಂಕ್ ಅಪಾರ್ಟ್ಮೆಂಟ್ ನ ಭದ್ರತಾ ಸಿಬ್ಬಂದಿಯನ್ನು ಆ ಮುಸುಕುಧಾರಿ ಮಹಿಳೆ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಆಕೆ ಬಗ್ಗೆ ಗೊತ್ತಿಲ್ಲ, ಸುಶಾಂತ್ ಸಂಬಂಧಿಕರಿರಬಹುದು ಎಂದು ಒಳಗೆ ಬಿಟ್ಟೆ ಎಂದಿದ್ದಾನೆ.

ಅನ್ಯರಿಗೆ ಪ್ರವೇಶಿಸಲು ಅವಕಾಶ ನೀಡಿದ್ದು ತಪ್ಪು
ಈ ಬಗ್ಗೆ ಹೆಚ್ಚಿನ ತನಿಖೆ ಸುಶಾಂತ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸುಶಾಂತ್ ವಕೀಲರು ಮಾತನಾಡಿ, ಕ್ರೈಂ ನಡೆದ ಸ್ಥಳದಲ್ಲಿ ಅನ್ಯರಿಗೆ ಪ್ರವೇಶಿಸಲು ಅವಕಾಶ ನೀಡಿದ್ದು ತಪ್ಪು, ಈ ವಿಡಿಯೋದಲ್ಲಿ ಎಲ್ಲವೂ ಅನುಮಾನಾಸ್ಪದವಾಗಿ ಕಾಣುತ್ತಿದೆ. ಆಕೆ ಯಾರು? ಆ ಬ್ಯಾಗಿನಲ್ಲಿ ಏನಿತ್ತು? ಎಂಬುದು ಎಲ್ಲರಿಗೂ ತಿಳಿಯಬೇಕಿದೆ ಎಂದಿದ್ದಾರೆ.ಈ ಬಗ್ಗೆ ಭದ್ರತಾ ಸಿಬ್ಬಂದಿ ಕೂಡಾ ಸ್ಪಷ್ಟಪಡಿಸಿದ್ದು, ಮುಂಬೈ ಪೊಲೀಸರು ಸಮ್ಮುಖದಲ್ಲೇ ಆಕೆ ಒಳಗೆ ಹೋಗಿದ್ದಾಳೆ, ಹೀಗಾಗಿ, ನಮಗೆ ಹೆಚ್ಚು ತಿಳಿದಿಲ್ಲ ಎಂದಿದ್ದಾನೆ.

ಪ್ರಕರಣಕ್ಕೆ ತಿರುವು ನೀಡಿದ ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿಕೆ
ಸುಶಾಂತ್ ದೇಹವನ್ನು ಮೊದಲಿಗೆ ನೋಡಿದಾಗ ಹಳದಿ ಬಣ್ಣಕ್ಕೆ ತಿರುಗಿತ್ತು. ನೇಣು ಹಾಕಿಕೊಂಡು ಸತ್ತಿದ್ದರೆ ದೇಹದ ಬಣ್ಣದಲ್ಲಿ ಬದಲಾವಣೆಯಾಗುವುದಿಲ್ಲ. ಬಾಯಿಂದ ನೊರೆ ಬಂದಿರಬೇಕಿತ್ತು. ಕಣ್ಣು ಮೇಲಕ್ಕೆ ತಿರುಗಿರಬೇಕಿತ್ತು. ನಾಲಗೆ ಕಚ್ಚಿಕೊಂಡಿರಬೇಕಿತ್ತು. ಇಂಥ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಕುತ್ತಿಗೆ ಬಳಿ ಕಾಣಿಸುವ ಗುರುತು ಕೂಡಾ ಮುಂಭಾಗದಲ್ಲಿ ಗಾಢವಾಗಿದೆ. ಸಾಮಾನ್ಯವಾಗಿ ನೇಣು ಬಿಗಿದಾಗ ಇರುವಂಥ ಗುರುತು ಇಲ್ಲ. ಕಾಲು ಬಾಗಿತ್ತು. ಮೊಣಕಾಲು ಮುರಿದಂತೆ ಕಾಣುತ್ತಿತ್ತು. ಕಾಲಿನಲ್ಲಿ ಗುರುತು ಪರೀಕ್ಷಿಸಬಹುದು ಎಂದು ಸುಶಾಂತ್ ಶವವನ್ನು ಆಪಾರ್ಟ್ಮೆಂಟ್ ನಿಂದ ಆಸ್ಪತ್ರೆಗೆ ಸಾಗಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಹೇಳಿದ್ದು, ಪ್ರಕರಣಕ್ಕೆ ತಿರುವು ನೀಡಿದೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಜೂನ್ 14ರಂದು 34 ವರ್ಷ ವಯಸ್ಸಿನ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ಅವರ ದೇಹವು ಬಾಂದ್ರಾದ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಗ್ಗಂಟಾಗಿರುವ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಮಹತ್ವ ಪಡೆದುಕೊಂಡಿತ್ತು. ಅಂತಿಮ ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಂಬೈ ಪೊಲೀಸರಿಗೆ ವೈದ್ಯರು ಸಲ್ಲಿಸಿದ್ದಾರೆ. ಇದು 'ನೇಣು ಹಾಕಿಕೊಂಡ ಕಾರಣದಿಂದ ಉಸಿರುಗಟ್ಟಿ ಸಂಭವಿಸಿದ ಸಾವು' ಎಂದೇ ಹೇಳಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ದೇಹದಲ್ಲಿ ಯಾವುದೇ ಒದ್ದಾಟದ ಕುರುಹು ಅಥವಾ ಹೊರ ಭಾಗದ ಗಾಯಗಳಿಲ್ಲ. ಅವರ ಉಗುರುಗಳು ಸಹ ಸ್ವಚ್ಛವಾಗಿವೆ. ಇದು ಸ್ಪಷ್ಟವಾಗಿ ಆತ್ಮಹತ್ಯೆಯ ಪ್ರಕರಣ. ಇದರಲ್ಲಿ ಯಾವುದೇ ಬೇರೆ ಕೈವಾಡಗಳು ಇಲ್ಲ ಎಂದು ಆರ್ ಸಿ ಕೂಪರ್ ಮುನ್ಸಿಪಾಲ್ ಆಸ್ಪತ್ರೆಯ ಐವರು ತಜ್ಞ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.












Click it and Unblock the Notifications