ಮಹಿಳೆಯು ಜನನಾಂಗ ಕತ್ತರಿಸಿದ್ದ ವ್ಯಕ್ತಿ ಮುಂಬೈ ಆಸ್ಪತ್ರೆಯಲ್ಲಿ ಸಾವು
ಮುಂಬೈ, ಡಿಸೆಂಬರ್ 30: ಪ್ರೀತಿಸುವಂತೆ ಹಿಂಸೆ ನೀಡಿದ ಎಂಬ ಸಿಟ್ಟಿನಲ್ಲಿ ಇತ್ತೀಚೆಗೆ ಮಹಿಳೆ ಹಾಗೂ ಆಕೆಯ ಇಬ್ಬರು ಸಹಚರರು ಸೇರಿ ಇಪ್ಪತ್ತೇಳು ವರ್ಷದ ಯುವಕನೊಬ್ಬನನ್ನು ಥಳಿಸಿ, ಆತನ ಜನನಾಂಗ ಕತ್ತರಿಸಿದ್ದರು. ಆತ ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತುಷಾರ್ ಪೂಜಾರೆ ಎಂಬ ಗೃಹ ಸಾಲ ಸಲಹೆಗಾರ ನಲವತ್ತೆರಡು ವರ್ಷದ ಮಹಿಳೆಗೆ ತನ್ನನ್ನು ಪ್ರೀತಿಸುವಂತೆ ಬೆನ್ನು ಬಿದ್ದಿದ್ದ. ಅಷ್ಟೇ ಅಲ್ಲ, ಆಕೆ ಮನೆಗೆ ಹೋಗಿ, ಮಹಿಳೆ ಪತಿಯ ಎದುರಿಗೆ ತನಗೆ ಆಕೆ ಬಗ್ಗೆ ಇರುವ ಮೋಹವನ್ನು ತಿಳಿಸಿದ್ದ ಎಂಬ ಆರೋಪ ಮಾಡಲಾಗಿತ್ತು.
ಇಲ್ಲಿಗೆ ನಿಲ್ಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆ ಮಹಿಳೆಯು ಹದಿನೈದು ದಿನದ ಹಿಂದೆ ಎಚ್ಚರಿಸಿದ್ದಳು ಎಂದು ಮೃತನ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ. ಡಿಸೆಂಬರ್ ಇಪ್ಪತ್ತೈದನೇ ತಾರೀಕು ತುಷಾರ್ ಪೂಜಾರೆಯನ್ನು ಕರೆಸಿಕೊಂಡು, ಹಲ್ಲೆ ನಡೆಸಿದ ಆ ಮಹಿಳೆ ಚಾಕುವಿನಿಂದ ಜನನಾಂಗವನ್ನು ಕತ್ತರಿಸಿದ್ದಳು.

ಮುಂಬೈನ ಬೈಕುಲ್ಲಾದಲ್ಲಿರುವ ಜೆಜೆ ಆಸ್ಪತ್ರೆಯಲ್ಲಿ ತುಷಾರ್ ಮೃತಪಟ್ಟಿದ್ದಾನೆ. ಮೂವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications