ಟಿಸಿಎಸ್ ಟೆಕ್ಕಿ ಮೇಲೆ ಅತ್ಯಾಚಾರ, ಹತ್ಯೆ: ಶಂಕೆ

TCS ಸಾಫ್ಟ್ ವೇರ್ ಇಂಜಿನಿಯರ್ ಏಸ್ತರ್ ಅನೂಹ್ಯ (23) ಅವರ ಅರೆ ಬೆಂದ ದೇಹವು ಈಸ್ಟರ್ನ್ ಎಕ್ಸ್ ಪ್ರೆಸ್ ಹೈವೆ ಬಳಿ ಕಂಜೂರಮಾರ್ಗ್ ನಲ್ಲಿ ನಿರ್ಜನ ಪ್ರದೇಶದಲ್ಲಿ ಗುರುವಾರ ದೊರೆತಿದೆ. ಇದು ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದು, ಸಾಕ್ಷ್ಯವನ್ನು ನಾಶಪಡಿಸಲು ಶವವನ್ನು ಸುಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೃತ, ಏಸ್ತರ್ ಅನೂಹ್ಯ ಗೊರೆಗಾಂವ್ ನಲ್ಲಿರುವ TCS ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದರು. ಜನವರಿ 5ರಂದು ಮುಂಬೈಗೆ ಬಂದಿದ್ದ ಏಸ್ತರ್ ಅನೂಹ್ಯ ಆನಂತರ ಕಾಣೆಯಾಗಿದ್ದರು. ಏಸ್ತರ್ ಅನೂಹ್ಯ ಮೂಲತಃ ಆಂಧ್ರದ ಮಚಲೀಪಟ್ಟಣಂನವರು.
ಜನವರಿ 5ರಂದು ಏಸ್ತರ್ ಅನೂಹ್ಯ ಮೊಬೈಲ್ ಫೋನಿನ ಕಾಲ್ ಸಿಗ್ನಲ್ ಕಂಜೂರಮಾರ್ಗ್ ಬಳಿ ಸುಳಿವು ಸಿಕ್ಕಿತ್ತು. ಹಾಗಾಗಿ ಆಕೆಯ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಆ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸಿದಾಗ ಅರೆಬೆಂದ ಶವ ಪತ್ತೆಯಾಗಿದೆ. ಆದರೆ ದೂರು ನೀಡಿದ ಬಳಿಕವೂ ಏಸ್ತರ್ ಅನೂಹ್ಯ ಪತ್ತೆಗೆ ಪೊಲೀಸರು ಯತ್ನಿಸಿರಲಿಲ್ಲ. ಕುಟುಂಬಸ್ಥರೇ ಶವ ರೂಪದಲ್ಲಿ ಮಗಳ ಪತ್ತೆ ಮಾಡುವಂತಾಗಿದೆ ಎಂದು ಆಕೆಯ ತಂದೆ ಅಲವತ್ತುಕೊಂಡಿದ್ದಾರೆ.
ಶವ ಪತ್ತೆಯಾದ ಕಂಜೂರಮಾರ್ಗ್, ಕುರ್ಲಾ ಪ್ರದೇಶದಲ್ಲಿದ್ದು ಅಪರಾಧಿಗಳ ಸ್ವರ್ಗವಾಗಿದೆ. ವಿಜಯವಾಡಾದಿಂದ ಹೊರಟಿದ್ದ ಏಸ್ತರ್ ಅನೂಹ್ಯ, ಕುರ್ಲಾ ರೈಲ್ವೆ ಸ್ಟೇಷನನ್ನಿನಲ್ಲಿ ಇಳಿದಿದ್ದಳು. ಆ ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿ, ಶವವನ್ನು ಸುಟ್ಟುಹಾಕುವ ಯತ್ನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಏಸ್ತರ್ ಅನೂಹ್ಯ ಧರಿಸಿದ್ದ ಉಂಗುರವನ್ನು ಪತ್ತೆ ಹಚ್ಚುವ ಮೂಲಕ ತಂದೆ ಜೊನಾಥನ್ ಅವರು ತಮ್ಮ ಮಗಳನ್ನು ಗುರುತು ಹಿಡಿದಿದ್ದರು.












Click it and Unblock the Notifications