ಮಲಬಾರ್ ಮೌಲ್ವಿ ಸಾವು: ಕಾಲ್ತುಳಿತಕ್ಕೆ 18 ಮಂದಿ ಬಲಿ
ಮುಂಬೈ. ಜ. 18: ದಕ್ಷಿಣ ಮುಂಬೈನ ಮಲಬಾರ್ ಹಿಲ್ಸ್ ನಲ್ಲಿ ಕಾಲ್ತುಳಿತ ಸಂಭವಿಸಿದ್ದು, 18 ಮಂದಿ ಬಲಿಯಾಗಿದ್ದಾರೆ. ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಮೌಲ್ವಿ ಒಬ್ಬರು ಸಾವಿಗೀಡಾಗಿದ್ದು, ಅವರ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆಂದು ಜನ ಜಮಾಯಿಸಿದ್ದ ವೇಳೆ ಈ ಘಟನೆ ನಡೆದಿದೆ. ಇಂದು ಅವರ ಅಂತ್ಯಕ್ರಿಯೆ ನಡೆಯುವುದಿತ್ತು.
ಇಲ್ಲಿನ ದಾವೂದಿ ಬೊಹ್ರಾದಲ್ಲಿ ಧಾರ್ಮಿಕ ಗುರು ಸೇದ್ನಾ ಮೊಹಮದ್ ಬಹ್ರಾನುದ್ದೀನ್ ಮನೆಯೆದುರು ಶನಿವಾರ ಬೆಳಗಿನ ಜಾವ 1 ಗಂಟೆಯಲ್ಲಿ ಈ ದುರಂತ ಸಂಭವಿಸಿದೆ. ಮುಲ್ಲಾ ಸೇದ್ನಾ ಮೊಹಮದ್ ಬಹ್ರಾನುದ್ದೀನ್ ಶುಕ್ರವಾರ ಸಾವಿಗೀಡಾಗಿದ್ದರು. ಇಂದು ಬೆಳಗ್ಗೆ ಅಂತಿಮ ದರ್ಶನಕ್ಕೆಂದು ಅವರ ಮನೆಯೆದುರು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.
ಯಾರೀ Syedna Mohammed Burhanuddin?:

Dawoodi Bohra ಸಮುದಾಯಕ್ಕೆ ಸೇರಿದ ಮೌಲ್ವಿ. ಶುಕ್ರವಾರ ಬೆಳಗ್ಗೆ ಮಲಬಾರ್ ಹಿಲ್ಸ್ ನಲ್ಲಿದ್ದ ಸೈಫೀ ಮಹಲ್ ನಲ್ಲಿ ತಮ್ಮ 102ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಮುಂದಿನ ತಿಂಗಳು ಅವರಿಗೆ 103 ವರ್ಷ ತುಂಬುತ್ತಿತ್ತು ಎಂದು ಅವರ ಮಾಧ್ಯಮ ಸಲಹೆಗಾರ ಷೇಕ್ ಖುರೇಶಿ ರಾಗಿಬ್ ಹೇಳಿದ್ದಾರೆ.
ಮೂಲತಃ ಸೂರತ್ ನವರಾದ ಮೌಲ್ವಿ ಬಹ್ರಾನುದ್ದೀನ್ ಗೆ 6 ಮಂದಿ ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಎರಡನೆಯ ಪುತ್ರ ಸೇದ್ನಾ ಮುಫದ್ದಲ್ ಸೈಫುದ್ದೀನ್ ಅವರನ್ನು 2001ರಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದರು.
ದಾವೂದಿ ಬೊಹ್ರಾ ಸಮುದಾಯದವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, 10 ದಿನಗಳ ಕಾಲ ಮೌನಾಚರಣೆಯಲ್ಲಿ ತೊಡಗಿದ್ದರು. ಮೌಲ್ವಿ ಬಹ್ರಾನುದ್ದೀನ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸತೊಡಗಿದ್ದರು. ದೂರದ ಥಾಣೆಯಿಂದಲೂ ಜನ ಸಾಗರ ಹರಿದುಬಂದಿತ್ತು. ದಾವೂದಿ ಬೊಹ್ರಾ ಸಮುದಾಯದವರು ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಈ ಭಾಗದಲ್ಲಿದ್ದಾರೆ.
ಜನ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿರುವುದನ್ನು ಕಂಡು ತಮ್ಮ ಸ್ಥಳಗಳಲ್ಲೇ ಇರುವ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ನಡೆಸುವಂತೆ ಖುದ್ದು ಮುಖ್ಯಮಂತ್ರಿ, ರಾಜ್ಯಪಾಲರು, ಗಃರ ಸಚಿವರು ಸೇಎರಿದಂತೆ ಅನೇಕ ಗಣ್ಯರು ಭಕ್ತರಲ್ಲಿ ವಿನಂತಿ ಮಾಡಿದ್ದರು. ಆದರೂ ಜನ ಮಲಬಾರ್ ಹಿಲ್ಸ್ ನತ್ತ ನುಗ್ಗಿದ್ದರು. ಇಂದು ಬೆಳಗ್ಗೆ ಮೌಲ್ವಿ ಬಹ್ರಾನುದ್ದೀನ್ ದೇಹವನ್ನು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಆ ವೇಳೆ ನೂಕುನುಗ್ಗಲುಂಟಾಗಿ ಈ ಅನಾಹುತ ಸಂಭವಿಸಿದೆ.












Click it and Unblock the Notifications