ಶೀನಾ ಬೋರಾ ಹತ್ಯೆ: ಪೀಟರ್ ಮಾಸ್ಟರ್ ಮೈಂಡ್
ಮುಂಬೈ, ನ.26: ಶೀನಾ ಬೊರಾ ಹತ್ಯೆ ಪ್ರಕರಣ ಮತ್ತೆ ಹೊಸ ತಿರುವು ಪಡೆದುಕೊಂಡಿದೆ. ಶೀನಾ ಹತ್ಯೆಗೆ ಸಂಚು ರೂಪಿಸಿದ್ದು ಇಂದ್ರಾಣಿಯಲ್ಲ, ಪೀಟರ್ ಮುಖರ್ಜಿ ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಸಿಬಿಐ ಮೂಲಗಳಿಂದ ತಿಳಿದು ಬಂದಿದೆ.
ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಪತಿ ಪೀಟರ್ ಮುಖರ್ಜಿ ಅವರು ತಮ್ಮ ಮಲ ಮಗಳಾದ ಶೀನಾ ಹತ್ಯೆ ಮಾಡಲು ಸಂಪೂರ್ಣ ಸ್ಕೆಚ್ ಹಾಕಿದ್ದರು ಎಂದು ಆಜ್ ತಕ್ ಕೂಡಾ ವರದಿ ಮಾಡಿದೆ. ಕೋರ್ಟಿಗೆ ಸಲ್ಲಿಸಲಾಗಿರುವ ದೋಷಾರೋಪಣ ಪಟ್ಟಿಯಲ್ಲಿ ಇಂದ್ರಾಣಿ ಅವರ ಹೆಸರು ಎಲ್ಲರಿಗಿಂತ ಮೊದಲಿದೆ.
ಅದರೆ, ಈಗ 9 ಎಕ್ಸ್ ಸುದ್ದಿ ಸಂಸ್ಥೆ ಸ್ಥಾಪಕ ಪೀಟರ್ ಅವರ ಬಂಧನ, ವಿಚಾರಣೆ ಬಳಿಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. 24 ವರ್ಷ ವಯಸ್ಸಿನ ಶೀನಾ ಹತ್ಯೆಗೆ ಸಂಬಂಧಿಸಿದಂತೆ ಪೀಟರ್ ಮುಖರ್ಜಿ ವಿರುದ್ಧ ಐಪಿಸಿ ಸೆಕ್ಷನ್ 302, 201, 34, 420, 364 ಹಾಗೂ 120 ಬಿ ಅನ್ವಯ ಪ್ರಕರಣ ದಾಖಲಿಸಿಕೊಂಡು ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ವ್ಯಕ್ತಿಯಾಗಿದ್ದರು.

ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಅವರ ಕಾರು ಚಾಲಕ ಶ್ಯಾಮ್ ರಾಯ್, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾರನ್ನು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. 2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ.
ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿದೆ. ಶೀನಾ ಹತ್ಯೆ ಬಗ್ಗೆ ಎಲ್ಲವೂ ತಿಳಿದಿದ್ದರೂ ವಿಷಯ ಮುಚ್ಚಿಟ್ಟ ಆರೋಪ ಹೊತ್ತಿರುವ ಪೀಟರ್ ಅವರ ವಿಚಾರಣೆ ನಡೆಸಿರುವ ಸಿಬಿಐ ಇನ್ನೂ ಅಧಿಕೃತ ಹೇಳಿಕೆ ಹೊರ ಹಾಕಿಲ್ಲ. ಡಿ.3 ರಂದು ಸಿಬಿಐ ಕಸ್ಟಡಿ ಅವಧಿ ಅಂತ್ಯಗೊಳ್ಳಲಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications