"ಕೋಳಿ ಸಾಕಾಣಿಕೆ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಇಂಟಿಗ್ರೇಷನ್ ಕಂಪನಿಗಳು!'
ಕೋಳಿ ಸಾಕಾಣಿಕೆ ರೈತರ ಬದುಕಿನ ಜೊತೆ ಇಂಟಿಗ್ರೇಷನ್ ಕಂಪನಿಗಳು ಚೆಲ್ಲಾಟವಾಡುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಗಂಭೀರ ಆರೋಪ ಮಾಡಿದ್ದಾರೆ. ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರದ ಮೌನ ಮಾತ್ರ ಮುರಿಯುತ್ತಿಲ್ಲ ಎಂದಿದ್ದಾರೆ.
ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ಸಾಕಾಣಿಕೆ ವೆಚ್ಚವಾದ ಪ್ರತಿ ಕೆ.ಜಿಗೆ ₹10 ಪಾವತಿಸಲು ಇಂಟಿಗ್ರೇಷನ್ ಕಂಪನಿಗಳು ನಿರಾಕರಿಸುತ್ತಿವೆ. ಏಳು ತಿಂಗಳ ಹಿಂದೆಯೇ ನಿಗದಿಯಾಗಿರುವ ನ್ಯಾಯಯುತ ಮೊತ್ತವನ್ನ ರೈತರಿಗೆ ನೀಡದೆ ಸತಾಯಿಸುತ್ತಿರುವ ಕಂಪನಿಗಳ ಧೋರಣೆ ಖಂಡನೀಯ. ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಕೋಳಿ ಮರಿ ಸ್ವೀಕರಿಸುವುದನ್ನು ಮತ್ತು ಕೋಳಿ ಪೂರೈಕೆಯನ್ನು ಸ್ಥಗಿತಗೊಳಿಸಿ ರೈತರು ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಆದರೆ ರೈತರ ಸಮಸ್ಯೆ ಬಗೆಹರಿಸಬೇಕಾದ ರಾಜ್ಯ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಇಷ್ಟೇ ಅಲ್ಲ, ಮುಷ್ಕರ ಹತ್ತಿಕ್ಕಲು ಕಂಪನಿಗಳು ಅನುಸರಿಸುತ್ತಿರುವ ತಂತ್ರಗಳು ಮತ್ತಷ್ಟು ಆತಂಕಕಾರಿಯಾಗಿವೆ. ಟ್ರೇಡರ್‌ಗಳ ಮೂಲಕ ರೈತರ ಮೇಲೆ ಒತ್ತಡ ಹೇರುವುದು, ಬೆದರಿಕೆ ಹಾಕುವುದು ಹಾಗೂ ಹಲ್ಲೆ ನಡೆಸುವುದು ನಡೆಯುತ್ತಿದೆ ಎಂಬ ಗಂಭೀರ ಆರೋಪಗಳಿವೆ. ದೇವನಹಳ್ಳಿ ತಾಲ್ಲೂಕಿನಲ್ಲಿ ನಡೆದ ದಾಳಿಯಲ್ಲಿ ಆರು ರೈತರು ಗಾಯಗೊಂಡಿದ್ದಾರೆ. ಮಾದಕ ವಸ್ತು ಸೇವಿಸಿದ ವ್ಯಕ್ತಿಗಳನ್ನು ಬಳಸಿಕೊಂಡು ರೈತರನ್ನು ಬೆದರಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ತಮ್ಮ ಹಕ್ಕು ಕೇಳುವ ರೈತರನ್ನು ಬೆದರಿಸುವುದೇ ಕಂಪನಿಗಳ ದಂಧೆಯೇ? ರೈತರ ಪರಿಶ್ರಮದಿಂದ ಲಾಭ ಗಳಿಸುವ ಕಂಪನಿಗಳಿಗೆ ಅವರ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲವೇ? ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಸರ್ಕಾರ ಯಾಕೆ ಸುಮ್ಮನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೇ ನಿಲ್ಲದೆ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ ಸೇರಿದಂತೆ ಹತ್ತು ಮುಖಂಡರ ವಿರುದ್ಧ ಏಕಪಕ್ಷೀಯ ಪ್ರತಿಬಂಧಕಾಜ್ಞೆ ಪಡೆಯಲು ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿರುವುದು ಅವರ ರೈತ ವಿರೋಧಿ ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ.
ಆದರೆ ಎಂದಿನಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ರೈತರ ಸಂಕಷ್ಟ ಕಣ್ಣಿಗೆ ಬೀಳುತ್ತಿಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು ಬೀದಿಗಿಳಿದು ಹೋರಾಡುತ್ತಿದ್ದರೂ ಸರ್ಕಾರದ ನಿರ್ಲಕ್ಷ್ಯ ಏಕೆ? ದೊಡ್ಡ ಕಂಪನಿಗಳ ಹಿತಾಸಕ್ತಿಯ ಮುಂದೆ ರೈತರ ಬದುಕಿಗೆ ಬೆಲೆಯೇ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸರ್ಕಾರ ಇನ್ನಾದರೂ ತನ್ನ ಜವಾಬ್ದಾರಿ ಅರಿಯಲಿ. ತಕ್ಷಣ ಇಂಟಿಗ್ರೇಷನ್ ಕಂಪನಿಗಳ ಸಭೆ ಕರೆದು ಪ್ರತಿ ಕೆ.ಜಿಗೆ ₹10 ಕನಿಷ್ಠ ಸಾಕಾಣಿಕೆ ವೆಚ್ಚ ಪಾವತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರೈತರ ಮೇಲೆ ಹಲ್ಲೆ, ಬೆದರಿಕೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ರೈತರ ಶಾಂತಿಯುತ ಮುಷ್ಕರಕ್ಕೆ ಅಡ್ಡಿಪಡಿಸುವ ಮತ್ತು ಬಲವಂತವಾಗಿ ಕೋಳಿ ಸಾಗಾಣಿಕೆ ಮಾಡುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು. ಹೋರಾಟ ನಿರತ ರೈತರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವಿಷಯವನ್ನು ಕಂಪನಿಗಳು ಮತ್ತು ಸರ್ಕಾರ ನೆನಪಿಟ್ಟುಕೊಳ್ಳಲಿ. ರೈತರ ಪರಿಶ್ರಮವಿಲ್ಲದೆ ನಿಮ್ಮ ಲಾಭದ ಸಾಮ್ರಾಜ್ಯ ನಡೆಯುವುದಿಲ್ಲ. ರೈತರನ್ನು ದುಡಿಸಿಕೊಳ್ಳುವಾಗ ಬೇಕು, ಅವರ ನ್ಯಾಯಯುತ ಬೇಡಿಕೆ ಈಡೇರಿಸುವಾಗ ಮಾತ್ರ ನಿರ್ಲಕ್ಷ್ಯವೇ ಎಂದು ಪ್ರಶ್ನೆ ಮಾಡಿರುವ ಅವರು, ರೈತರನ್ನು ಬೆದರಿಸಿ ಅವರ ಹೋರಾಟವನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ. ರೈತರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ರೈತರ ಬೆವರಿನ ಶೋಷಣೆಯನ್ನು ನಿಲ್ಲಿಸಿ. ರೈತರ ಮೇಲಿನ ದಬ್ಬಾಳಿಕೆಗೆ ಅಂತ್ಯ ಹಾಡಿ. ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ತಕ್ಷಣ ಪಾವತಿಸಿ. ಕೋಳಿ ಸಾಕಾಣಿಕೆ ರೈತರ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.




Click it and Unblock the Notifications
