ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸೋದು ಸುಲಭವಿಲ್ಲ: ಶಿವಸೇನೆ ನಾಯಕ
ಮುಂಬೈ, ಅಕ್ಟೋಬರ್ 24: "ಮಹಾರಾಷ್ಟ್ರದಲ್ಲಿ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವೇ ಇಲ್ಲ. ಅದಕ್ಕೆ ನಮ್ಮ ನೆರವು ಬೇಕೇ ಬೇಕು" ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
"ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ, 124 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಶಿವಸೇನೆ, 100 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ" ಎಂದು ರಾವತ್ ಹೇಳಿದರು.
"ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ-ಶಿವಸೇನೆ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಎಂದಿದೆ. ಅದು ಸತ್ಯ. ಆದರೆ ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವೇ ಇಲ್ಲ" ಎಂದು ರಾವತ್ ಹೇಳಿದರು.

ಮಹಾರಾಷ್ಟ್ರದಲ್ಲಿ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 145. ಬಿಜೆಪಿ 164 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಉಳಿದ ಕ್ಷೇತ್ರಗಳಲ್ಲಿ ಇತರ ಮೈತ್ರಿ ಪಕ್ಷಗಳು ಸ್ಪರ್ಧಿಸಿವೆ.
"ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಲಿದೆ, ಅದರಲ್ಲಿ 100 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶಿವಸೇನೆಯೇ ಗೆಲ್ಲಲಿದೆ" ಎಂದು ರಾವತ್ ವಿಶ್ವಾಸ ವ್ಯಕ್ತಪಡಿಸಿದರು.
ಈ ವರ್ಷ ಏಪ್ರಿಲ್ -ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡಿದ್ದವು.
ಮಹಾರಾಷ್ಟ್ರದಲ್ಲಿ 2014 ರಲ್ಲೂ ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಶಿವಸೇನೆ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆ ನಂತರ ಬಿಜೆಪಿ 122(288), ಶಿವಸೇನೆ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಕೆಲವು ತಿಂಗಳ ನಂತರ ಉಭಯ ಪಕ್ಷಗಳೂ ಮೈತ್ರಿ ಮಾಡಿಕೊಂಡಿದ್ದವು.












Click it and Unblock the Notifications