ರಾಮ ಮಂದಿರ ನಿರ್ಮಾಣ: ಮೋದಿ ಹೇಳಿದ 'ಭರವಸೆ' ಮಾತು
ಮುಂಬೈ, ಸೆಪ್ಟೆಂಬರ್ 19: ಚುನಾವಣೆ ಮುಗಿದ ಮೇಲೆ ಬಹುದಿನಗಳ ಬಳಿಕ ನರೇಂದ್ರ ಮೋದಿ ಅವರು ರಾಮ ಮಂದಿರ ವಿವಾದದ ಬಗ್ಗೆ ಮಾತನಾಡಿದ್ದಾರೆ.
ನಾಸಿಕ್‌ನಲ್ಲಿ ಭಾರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, 'ರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂಕೋರ್ಟ್ ಮೇಲೆ ವಿಶ್ವಾಸವಿಡಿ' ಎಂದು ಹೇಳಿದ್ದಾರೆ.
ಶಿವಸೇನೆ ಪಕ್ಷದ ಮುಖಂಡ ಉದ್ಧವ್ ಠಾಕ್ರೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, 'ಕೆಲವು ದೊಡ್ಡ ಬಾಯಿಯವರು ರಾಮ ಮಂದಿರ ವಿಷಯದ ಬಗ್ಗೆ ಕೆಲಸಕ್ಕೆ ಬಾರದ ಹೇಳಿಕೆ ನೀಡುತ್ತಿರುತ್ತಾರೆ, ಆದರೆ ದೇಶದ ಜನಕ್ಕೆ ರಾಮ ಮಂದಿರ ವಿಷಯದ ಬಗ್ಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ' ಎಂದಿದ್ದಾರೆ.

'ಜನರು ಸುಪ್ರೀಂಕೋರ್ಟ್‌ಗೆ ಗೌರವ ಕೊಡಬೇಕು, ಸುಪ್ರೀಂಕೋರ್ಟ್ ಸಮಯ ತೆಗೆದುಕೊಂಡು ಪ್ರಕರಣದ ವಿಚಾರಣೆ ನಡೆಸುತ್ತಿದೆ, ಆದರೂ ಏಕೋ ಕೆಲವು ದೊಡ್ಡ ಬಾಯಿಯವರು ಪದೇ-ಪದೇ ರಾಮ ಮಂದಿರ ವಿಷಯದ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿದ್ದಾರೆ' ಎಂದು ಹೇಳಿದ್ದಾರೆ.
'ನಾವೆಲ್ಲರೂ ಸುಪ್ರೀಂಕೋರ್ಟ್ ಮೇಲೆ ನಂಬಿಕೆ ಇಡಬೇಕಿದೆ, ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಮೇಲೂ ನಂಬಿಕೆ ಇಡಬೇಕಿದೆ. ಆ ಬಾಯಿಹರುಕರಿಗೆ ನಾನು ಕೈಮುಗಿದು ರಾಮನ ಆಣೆಯಾಗಿ ಕೇಳುತ್ತೇನೆ, ದಯವಿಟ್ಟು ಭಾರತೀಯ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ ಎಂದು' ಎಂದು ಮೋದಿ ಶೀವಸೇನೆ ಮುಖಂಡರ ಹೆಸರು ಉಲ್ಲೇಖಿಸಿದೆ ವಾಗ್ದಾಳಿ ನಡೆಸಿದರು.
ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕೆಲವು ದಿನಗಳ ಹಿಂದೆ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, 'ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಇಟ್ಟಿಗೆ ಇಡಲು ತಯಾರಾಗಿರಿ' ಎಂದಿದ್ದರು. ಅಷ್ಟೆ ಅಲ್ಲದೆ, ದಿಟ್ಟ ನಿರ್ಧಾರ ತಳೆದು ಆರ್ಟಿಕಲ್ 370 ರದ್ದು ಮಾಡಿದಂತೆಯೇ ರಾಮ ಮಂದಿರ ನಿರ್ಮಾಣಕ್ಕೆ ದಿಟ್ಟ ನಿರ್ಧಾರ ತಳೆಯಿರಿ ಎಂದು ಅವರು ಮೋದಿಗೆ ಸವಾಲು ಹಾಕಿದ್ದರು.












Click it and Unblock the Notifications