ರಾಹುಲ್ ಇನ್ನು ರಜೆ ಹಾಕಿ ವಿದೇಶ ಪ್ರವಾಸಕ್ಕೆ ಹೋಗ್ಲಿ!
ನವದೆಹಲಿ, ಮಾರ್ಚ್ 5- ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸುದೀರ್ಘ ರಜೆ ಮೇಲೆ ವಿದೇಶ ಪ್ರವಾಸಕ್ಕೆ ಹೋಗಲಿ. ಚುನಾವಣೆ ಮುಗಿದ ಮೇಲೆ ವಾಪಸಾಗಲಿ ಎಂದು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕ ವ್ಯಂಗ್ಯವಾಡಿದೆ.
ಪಕ್ಷದ ವತಿಯಿಂದ ಮುಂಬೈನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮಹಾರಾಷ್ಟ್ರ ಸಮಾಜವಾದಿ ಪಕ್ಷ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಫರಹಾನ್ ಅಜ್ಮಿ ಮೇಲಿನಂತೆ ಹೇಳಿದ್ದಾರೆ.

ರಾಹುಲ್ ಗಾಂಧಿ ಕೈಯಲ್ಲಿ 10 ವರ್ಷಗಳಿಂದ ಅಧಿಕಾರವಿದ್ದರೂ ದೇಶಕ್ಕಾಗಿ ಅವರು ಏನೂ ಮಾಡಲಿಲ್ಲ. ಯುಪಿಎ- 1,2 ಆಡಳಿತಾವಧಿಯಲ್ಲಿ ನಡೆದ ನಾನಾ ಹಗರಣಗಳ ಪೈಕಿ ಒಂದು ಹಗರಣದ ಬಗ್ಗೆಯೂ ಅವರು ಬಾಯ್ಬಿಡಲಿಲ್ಲ. ಆದರೆ ಇನ್ನೇನು ಚುನಾವಣೆ ನಡೆಯಲಿದೆ ಅನ್ನುವಾಗ ನಿದ್ದೆಯಿಂದ ಎದ್ದು ಕುಳಿತವರಂತೆ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ. ಜನರೇನೂ ಮೂರ್ಖರಲ್ಲ' ಎಂದು ರಾಹುಲ್ ವಿರುದ್ಧ ಫರಹಾನ್ ಅಜ್ಮಿ ಕಿಡಿಕಾರಿದ್ದಾರೆ.
ಫರಹಾನ್ ಅಜ್ಮಿ, ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಬು ಅಜ್ಮಿ ಅವರ ಪುತ್ರ. ಫರಹಾನ್, ದಕ್ಷಿಣ ಮುಂಬೈನಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಕೇಂದ್ರ ಸಚಿವ ಮಿಲಿಂದ್ ದಿಯೋರಾ ಇಲ್ಲಿನ ಹಾಲಿ ಸಂಸದರು. ಗಮನಾರ್ಹವೆಂದರೆ ಮುಲಾಯಂ ಸಿಂಗ್ ನೇತೃತ್ವದ SP ಪಕ್ಷವು ಕೇಂದ್ರ ಯುಪಿಎ ಸರಕಾರಕ್ಕೆ ಬೆಂಬಲ ನೀಡಿದೆ.
'ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಮಯ- ಶಕ್ತಿಯನ್ನು ವ್ಯರ್ಥಗೊಳಿಸುವ ಬದಲು ಸುದೀರ್ಘ ರಜೆ ಮೇಲೆ ವಿದೇಶ ಪ್ರವಾಸಕ್ಕೆ ಹೋಗಲಿ. ಚುನಾವಣೆ ಮಗುದ ಮೇಲಷ್ಟೇ ವಾಪಸಾಗಿ, ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲಿ' ಎಂದು ಫರಹಾನ್ ಅಜ್ಮಿ ಹೇಳಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿರುವ ರಾಹುಲ್, ಆಮ್ ಆದ್ಮಿ ಪಕ್ಷದ ಸಿದ್ಧಾಂತವನ್ನು ಹೈಜಾಕ್ ಮಾಡಿದ್ದಾರೆ. ಇದು ಕೇವಲ ಚುನಾವಣಾ ಲಾಭಕ್ಕಾಗಿ ಮಾಡುತ್ತಿರುವ ಪ್ರಹಸನ. ಬೇರೆ ಯಾರದೋ ಸಿದ್ಧಾಂತದ ಮೂಲಕ ಗೆಲುವು ಸಾಧಿಸಲಾಗದು' ಎಂದು ಫರಹಾನ್ ಅಜ್ಮಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications