ಎರಡನೇ ಅವಧಿಗೆ ಮುಂದುವರಿಯದಿರಲು ರಘುರಾಮ್ ರಾಜನ್ ನಿರ್ಧಾರ

Posted By:
Subscribe to Oneindia Kannada

ಮುಂಬೈ, ಜೂನ್ 18 : ಬಿಜೆಪಿ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಅವರಿಂದ ತೀವ್ರ ಟೀಕೆಗೆ ಒಳಗಾಗಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಡಾ. ರಘುರಾಮ್ ರಾಜನ್ ಅವರು, ಸೆಪ್ಟೆಂಬರ್ 4ರ ನಂತರ ಎರಡನೇ ಅವಧಿಗೆ ಮುಂದುವರಿಯದಿರಲು ನಿರ್ಧರಿಸಿ ಅಚ್ಚರಿ ಮೂಡಿಸಿದ್ದಾರೆ.

ಈ ಸಂಗತಿಯನ್ನು ಆರ್ಬಿಐನ ಉದ್ಯೋಗಿಗಳಿಗೆ ಶನಿವಾರ ಬರೆದಿರುವ ಸುದೀರ್ಘ ಪತ್ರದಲ್ಲಿ ರಘುರಾಮ್ ರಾಜನ್ ಅವರು ಸ್ಪಷ್ಟಪಡಿಸಿದ್ದು, ಸೆಪ್ಟೆಂಬರ್ ನಂತರ ತಾವು ತಮಗೆ ಪ್ರಿಯವಾದ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುವುದಾಗಿ ತಿಳಿಸಿದ್ದು, ಅಗತ್ಯವಿದ್ದಾಗ ದೇಶ ಸೇವೆಗೆ ಯಾವಾಗಲೂ ಸಿದ್ಧರಿರುವುದಾಗಿ ನುಡಿದಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಚೀಫ್ ಎಕಾನಾಮಿಸ್ಟ್ ಆಗಿದ್ದ ರಘುರಾಮ್ ರಾಜನ್ (53), 2013ರಲ್ಲಿ ಮೂರು ವರ್ಷಗಳ ಅವಧಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಗವರ್ನರ್ ಆಗಿ ನೇಮಕವಾಗಿದ್ದರು.

Raghuram Rajan says no to second term as RBI governor

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ, ಅಂದಿದ್ದ ಆರ್ಥಿಕ ಸ್ಥಿತಿ, ತಾವು ಮೂರು ವರ್ಷಗಳಲ್ಲಿ ತೆಗೆದುಕೊಂಡ ಕ್ರಮಗಳು, ಸಿಬ್ಬಂದಿಗಳ ಸಹಕಾರದೊಂದಿಗೆ ತಾವು ಮಾಡಿದ ಸಾಧನೆಗಳ ಬಗ್ಗೆ ವಿಸ್ತಾರವಾಗಿ ರಘುರಾಮ್ ರಾಜನ್ ಬರೆದಿದ್ದಾರೆ.

"ನಾನು ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಾಗ ಭಾರತದ ಆರ್ಥಿಕ ಸ್ಥಿತಿ ಅತೀ ದುರ್ಬಲವಾಗಿತ್ತು. ಆದರೆ, ಮೂರು ವರ್ಷಗಳಲ್ಲಿ ಭಾರತದ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿದ್ದು, ವಿಶ್ವದಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ. ಹಣದುಬ್ಬರವೂ ಅರ್ಧದಷ್ಟು ತಗ್ಗಿದೆ" ಎಂದು ಪತ್ರದಲ್ಲಿ ಅವರು ಬರೆದುಕೊಂಡಿದ್ದಾರೆ.

ರಘುರಾಮ್ ರಾಜನ್ ಅವರ ಈ ನಿರ್ಧಾರದಿಂದ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅಚ್ಚರಿ ವ್ಯಕ್ತಪಡಿಸಿದ್ದರೆ, ಅವರ ಟೀಕಾಕಾರರಲ್ಲಿ ಮೊದಲ ಸ್ಥಾನದಲ್ಲಿರುವ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದ ಆರ್ಥಿಕ ಸ್ಥಿತಿಯನ್ನು ರಘುರಾಮ್ ರಾಜನ್ ದುರ್ಬಲಗೊಳಿಸುತ್ತಿದ್ದಾರೆ, ಅವರನ್ನು ಪದಚ್ಯುತಿಗೊಳಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಅವರು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತ ಬಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರನ್ನು ಮುಂದುವರಿಸಬೇಕೋ ಬಿಡಬೇಕೋ ಎಂಬ ಸಂಗತಿ ಚರ್ಚೆಯ ವಿಷಯವೇ ಆಗಬಾರದು ಎಂದು ಮಾಧ್ಯಮಗಳಿಗೆ ನರೇಂದ್ರ ಮೋದಿ ತಿರುಗೇಟು ನೀಡಿದ್ದರು.

ಇದರ ಜೊತೆಗೆ, ಮುಂದಿನ ಗವರ್ನರ್ ಯಾರಾಗಲಿದ್ದಾರೆ ಎಂಬ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಸದ್ಯದಲ್ಲಿಯೇ ಮುಂದಿನ ರಿಸರ್ವ್ ಬ್ಯಾಂಕ್ ಗವರ್ನರನ್ನು ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿಕೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reserve Bank of India Governor Raghuram Rajan has decided not to continue in the role for a second term and will return to academia once his tenure ends on September 4, 2016. Fifty-three-year-old Rajan, the former chief economist of the IMF, joined the RBI as its governor in 2013 and was handed a three year term.
Please Wait while comments are loading...