ದೇಶಕ್ಕೆ ಬೇಕಿರುವುದು ಅಭಿವೃದ್ಧಿ, ಜಾತಿಸಂಘರ್ಷವಲ್ಲ: ಫಡ್ನವಿಸ್
ಮುಂಬೈ, ಜನವರಿ 04: "ದೇಶಕ್ಕೆ ಸದ್ಯಕ್ಕೆ ಬೇಕಿರುವುದು ಅಭಿವೃದ್ಧಿಯೇ ಹೊರತು ಜಾತಿ ಸಂಘರ್ಷವಲ್ಲ" ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆಲವರು ಮಹಾರಾಷ್ಟ್ರವನ್ನು ಜಾತಿಯ ಹೆಸರಿನಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅನಗತ್ಯವಾಗಿ ಗಲಭೆಯನ್ನು ಸೃಷ್ಟಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

"ಮಹಾರಾಷ್ಟ್ರದ ಜನರು ಇಂಥ ಗಲಭೆಗಳಿಗೆ ಹೆಚ್ಚಿನ ಬೆಲೆ ನೀಡುವುದಿಲ್ಲ. ನಾವು ಎಂದಿಗೂ ಮಹಾರಾಷ್ಟ್ರವನ್ನು ಜಾತೀಯತೆಯಿಂದ ದೂರವಿರುವಂತೆ ನೋಡಿಕೊಳ್ಳುತ್ತಿದ್ದೇವೆ. ಆದರೆ ಇದೇ ಜಾತೀಯತೆಯಿಂದಾಗಿ ಮಹಾರಾಷ್ಟ್ರದ ಜನರಿಗೆ ನೋವಾಗುವುದು, ಗಾಯವಾಗುವುದು, ಸಾವಾಗುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ" ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.
ಭೀಮಾ-ಕೊರೆಗಾಂವ್ ವಿಜಯೋತ್ಸವ ಆಚರಣೆಯ ಸಂದರಭದಲ್ಲಿ ದಲಿತರು ಮತ್ತು ಮರಾಠರ ನಡುವೆ ಆರಂಭವಾದ ಗಲಭೆ, ಹಿಂಸಾಚಾರಕ್ಕೆ ತಿರುಗಿದ್ದು, ನಿನ್ನೆ ಮಹಾರಾಷ್ಟ್ರ ರಾಜ್ಯದಾದ್ಯಂತ ದಲಿತ ಸಂಘಟನೆಗಳು ಬಂದ್ ಆಚರಿಸಿದ್ದವು.












Click it and Unblock the Notifications