ರಾಜ್ ಠಾಕ್ರೆಗೆ ಹಳೆ ಕೇಸ್ ಕಂಟಕ; ಜಾಮೀನು ರಹಿತ ಬಂಧನ ವಾರಂಟ್
ಮುಂಬೈ, ಮೇ 3: ಮಸೀದಿಗಳ ಧ್ವನಿವರ್ಧಕಗಳ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿರುವ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಗೆ ಇದೀಗ ಹಳೆಯ ಪ್ರಕರಣವೊಂದು ಸಂಕಷ್ಟ ತಂದಿದೆ.
14 ವರ್ಷಗಳ ಹಿಂದಿನ ಪ್ರಕರಣವೊಂದರ ಸಂಬಂಧ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನ್ಯಾಯಾಲಯವೊಂದು ರಾಜ್ ಠಾಕ್ರೆ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ 2008ರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಆಗ ಅವರ ವಿರುದ್ಧ ಐಪಿಸಿ 109 ಮತ್ತು 117 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಮರುವಿಚಾರಣೆ ನಡೆಯುತ್ತಿದ್ದು ಸಾಂಗ್ಲಿ ಜಿಲ್ಲೆಯ ಶಿರಾಲದ ನ್ಯಾಯಾಲಯ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆಯನ್ನ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ರಾಜ್ ಠಾಕ್ರೆ ಜೊತೆಗೆ ಮತ್ತೊಬ್ಬ ಎಂಎನ್‌ಎಸ್ ಮುಖಂಡ ಶಿರೀಶ್ ಪರ್ಕಾರ್ ವಿರುದ್ಧವೂ ಬಂಧನ ವಾರೆಂಟ್ ಹೊರಡಿಸಲಾಗಿದೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ಪದೇ ಪದೇ ನೋಟಿಸ್ ಕೊಟ್ಟರೂ ಇಬ್ಬರೂ ಹಾಜರಾಗಿರಲಿಲ್ಲ. ಆದ್ದರಿಂದ ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿದ್ದು, ಜೂನ್ 8ರೊಳಗೆ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಆದೇಶಿಸಲಾಗಿದೆ.
ಪ್ರತೀಕಾರದ ಕ್ರಮ ಎಂದು ಆಕ್ರೋಶ: 2008ರಲ್ಲಿ ರಾಜ್ ಠಾಕ್ರೆ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಕೊಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿದ್ದರು. ಆ ವೇಳೆ ಉತ್ತರ ಭಾರತೀಯರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನ ಕೊಟ್ಟ ಆರೋಪ ಇದೆ. ಆಗ ಪ್ರಕರಣ ದಾಖಲಾಗಿ ಅವರ ಬಂಧನವಾಗಿತ್ತು. ಅದನ್ನು ಖಂಡಿಸಿ ಶಿರಾಲಾದಲ್ಲಿ ಎಂಎನ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಅಷ್ಟು ಹಳೆಯ ಪ್ರಕರಣವನ್ನು ಈಗ ಕೆದಕುತ್ತಿರುವುದಕ್ಕೆ ಎಂಎನ್‌ಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹತ್ತು ವರ್ಷಗಳಿಗಿಂತ ಹಿಂದಿನ ರಾಜಕೀಯ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಸರಕಾರಿ ನಿಯಮವೊಂದು ಇದೆ. ಆದರೂ 2008ರ ಪ್ರಕರಣವನ್ನು ಈಗಲೂ ಜೀವಂತವಾಗಿಡಲಾಗಿದೆ.
ಈಗ ರಾಜ್ ಠಾಕ್ರೆ ಮಸೀದಿಗಳ ಧ್ವನಿವರ್ಧಕಗಳ ವಿರುದ್ಧ ಧ್ವನಿ ಎತ್ತುತ್ತಿರುವುದರಿಂದ ಸೇಡಿನ ಕ್ರಮವಾಗಿ ಇದು ತೋರುತ್ತಿದೆ ಎಂಬುದು ಎಂಎನ್‌ಎಸ್ ಕಾರ್ಯಕರ್ತರ ಅಸಮಾಧಾನವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications