ಮಧ್ಯಂತರ ಚುನಾವಣೆ ಇಲ್ಲ: ಸ್ಥಿರ ಸರ್ಕಾರದ ಭರವಸೆ ನೀಡಿದ ಪವಾರ್
ಮುಂಬೈ, ನವೆಂಬರ್ 16: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಇನ್ನೂ ಮುಗಿಯದ ಹೊತ್ತಲ್ಲಿ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ನೀಡಿದ ಹೇಳಿಕೆ ಗಮನ ಸೆಳೆದಿದೆ.
"ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯೇ ಇಲ್ಲ. ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ" ಎಂದು ಶರದ್ ಪವಾರ್ ಭರವಸೆ ನೀಡಿದ್ದು, ಈ ಮೂಲಕ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಯಾಗುವ ಸೂಚನೆಯನ್ನು ಅವರು ನೀಡಿದ್ದಾರೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದ್ದು, ಬಿಜೆಪಿ ಸರ್ಕಾರ ರಚನೆಯ ಪ್ರಯತ್ನವನ್ನೇ ಕೈಬಿಟ್ಟಿದೆ. ಆದರೆ ಶಿವಸೇನೆಗೆ ಬೆಂಬಲ ನೀಡುವ ಕುರಿತು ಎನ್ ಸಿಪಿ ಮತ್ತು ಕಾಂಗ್ರೆಸ್ ನಡುವೆ ದಿನೇ ದಿನೇ ಚರ್ಚೆ ನಡೆಯುತ್ತಲೇ ಇದ್ದು, ಭಾನುವಾರ ಸಹ ಶರದ್ ಪವಾರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಮೂರು ಪಕ್ಷಗಳ ಮೈತ್ರಿ ಬಹುತೇಕ ಖಚಿತವಾಗಿದ್ದು, 50:50 ಸೂತ್ರ ಮತ್ತು ಸಂಪುಟದಲ್ಲಿ ಸಮಾನ ಸ್ಥಾನದ ಕುರಿತ ಬೇಡಿಕೆ ಇತ್ಯರ್ಥವಾಗಬೇಕಿದೆ.
ಕಳೆದ ಅಕ್ಟೋಬರ್ 21 ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಅಕ್ಟೋಬರ್ 24 ರಂದು ಹೊರಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿವೆ. ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ನಂಬರ್ 145. ಆದರೆ ಬಿಜೆಪಿ ಏಕಾಂಗಿಯಾಗಿ ಈ ಸ್ಥಾನ ಪಡೆಯಲು ಅಶಕ್ತವಾಗಿದ್ದರಿಂದ ಶಿವಸೇನೆಯ ಬೆಂಬಲ ಬಿಜೆಪಿಗೆ ಅನಿವಾರ್ಯವಾಗಿತ್ತು.
ಆದರೆ ಎನ್ ಸಿ ಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 54, 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಎರಡೂ ಪಕ್ಷಗಳು ಶಿವಸೇನೆಗೆ ಬೆಂಬಲ ನೀಡಿದರೆ ಮೂರು ಪಕ್ಷಗಳ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ.












Click it and Unblock the Notifications