ಮುಕೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣ: ಸಚಿನ್ ವಾಜೆಗೆ ಸೇರಿದ ಮತ್ತೊಂದು ಕಾರು ವಶ
ಮುಂಬೈ, ಮಾರ್ಚ್ 30: ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಸೇರಿದ ಮತ್ತೊಂದು ಹೈ ಎಂಡ್ ಕಾರನ್ನು ನವಿ ಮುಂಬೈನ ಕಮೋಥೆಯಿಂದ ವಶಪಡಿಸಿಕೊಂಡಿದೆ.
ಸ್ಫೋಟಕ ಪತ್ತೆ ಪ್ರಕರಣ ಮತ್ತು ಮನ್ಸುಖ್ ಹಿರೇನ್ ಸಾವಿನ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮಾಲೀಕತ್ವದ ಮಿತ್ಸುಬಿಷಿ ಔಟ್‌ಲ್ಯಾಂಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ ಪತ್ತೆಯಾದ ಕೆಲವೇ ದಿನಗಳ ಬಳಿಕ, ಮಾರ್ಚ್ 5ರಂದು ಮುಂಬೈನ ಕೊಳ್ಳವೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದ ಥಾಣೆ ಮೂಲದ ಆಟೊ ಮೊಬೈಲ್ ಬಿಡಿಭಾಗಗಳ ಮಾರಾಟಗಾರ ಮನ್ಸುಖ್ ಹಿರೇನ್ ಅವರನ್ನು ಅಪಹರಿಸಲು ಈ ಕಾರನ್ನು ಬಳಸಲಾಗಿತ್ತೇ ಎಂಬ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.

ಕಮೋಥೆಯ ಸೆಕ್ಟರ್ 7ರಲ್ಲಿನ ಶೀತಲಧಾರಾ ಹೌಸಿಂಗ್ ಸೊಸೈಟಿಯ ಸಮೀಪ ಮಿತ್ಸುಬಿಷಿ ಕಾರು ಪತ್ತೆಯಾಗಿದೆ. ಈ ಕಾರನ್ನು ಕೆಲವು ದಿನಗಳ ಒಳಗೆ ಸೊಸೈಟಿಯ ಒಳಭಾಗದಲ್ಲಿ ನಿಲ್ಲಿಸಲಾಗುತ್ತಿತ್ತು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಹೊರಭಾಗದಲ್ಲಿ ನಿಲ್ಲಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ಆಡಿ ಮತ್ತು ಒಂದು ಸ್ಕೋಡಾ ಕಾರು ಪತ್ತೆಯಾಗಬೇಕಿವೆ.
ಎರಡು ಮರ್ಸಿಡಿಸ್, ಒಂದು ಪ್ರಾಡೊ, ಸ್ಫೋಟಕ ಪತ್ತೆಯಾದ ಸ್ಕಾರ್ಪಿಯೊ ಹಾಗೂ ಒಂದು ಇನ್ನೋವಾ ಕಾರು ಸೇರಿದಂತೆ ಒಟ್ಟು ಐದು ಹೈ-ಎಂಡ್ ಕಾರುಗಳನ್ನು ಎನ್‌ಐಎ ಇದುವರೆಗೂ ವಶಪಡಿಸಿಕೊಂಡಿದೆ.












Click it and Unblock the Notifications