ಮನಿ ಲಾಂಡ್ರಿಂಗ್: ದಾವೂದ್ ಸೋದರ ಇಕ್ಬಾಲ್ ಕಸ್ಕರ್ 'ಇಡಿ' ವಶಕ್ಕೆ
ಮುಂಬೈ, ಫೆ.18: ಮನಿಲಾಂಡ್ರಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರು ಹಾಗೂ ಆಪ್ತರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ದಾವೂದ್ ಸೋದರಿ ಹಸೀನಾ ಪಾರ್ಕರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ತಂಡ ದಾಳಿ ನಡೆಸಿದ್ದರು. ಇಂದು ದಾವೂದ್ ಸೋದರ ಇಕ್ಬಾಲ್ ಕಸ್ಕರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಇಕ್ಬಾಲ್ ಕಸ್ಕರ್ ಸದ್ಯ ಥಾಣೆ ಜೈಲಿನಲ್ಲಿದ್ದು, ಅಲ್ಲಿಗೆ ತೆರಳಿ ಆತನನ್ನು ತಮ್ಮ ವಶಕ್ಕೆ ಇಡಿ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಇಕ್ಬಾಲ್ ಕಸ್ಕರ್‌ನನ್ನು ಪಿಎಂಎಲ್ಎ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ವಿಚಾರಣೆಗೆ ಕರೆದೊಯ್ಯಲಾಗುತ್ತದೆ.
ಬೆದರಿಕೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಅಪರಾಧಿ ಎನಿಸಿಕೊಂಡಿರುವ ಇಕ್ಬಾಲ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಈಗ ಪಿಎಂಎಲ್ಎ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಹೊಸ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು, ಆತನ ಕಸ್ಟಡಿ ಪಡೆಯಲಿದೆ.

ಮೂಲಗಳ ಪ್ರಕಾರ ಭೂಗತ ಜಗತ್ತಿನ ಹಲವಾರು ಲಿಂಕ್‌ಗಳು, ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳೊಂದಿಗೆ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹುಡುಕಾಟ ನಡೆಸುತ್ತಿದೆ. ಈ ದಾಳಿಯಲ್ಲಿ ಹಸೀನಾ ಪಾರ್ಕರ್, ಇಕ್ಬಾಲ್ ಅವರ ಆಸ್ತಿಯೂ ಸೇರಿದೆ.
''ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಮುಂಬೈನಲ್ಲಿ ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಇಡಿ ಶೋಧ ನಡೆಸುತ್ತಿದೆ. ಕೆಲವು ಭೂಗತ ಪಾತಕಿಗಳು ಮತ್ತು ರಾಜಕಾರಣಿಗಳು ಸಹ ತನಿಖೆಯಲ್ಲಿದ್ದಾರೆ, '' ಎಂದು ಎಎನ್‌ಐ ವರದಿಗಳ ಪ್ರಕಾರ ಮೂಲಗಳು ಸೇರಿಸಿವೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಭೂಗತ ಲೋಕಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಜಧಾನಿಯಲ್ಲಿ ಇಂತಹ ಹತ್ತು ಸ್ಥಳಗಳನ್ನು ಗುರುತಿಸಿದ್ದು, ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಇಡಿ ನಿರ್ಧರಿಸಿದೆ. ಇದಲ್ಲದೆ, ಈ ಪ್ರಕರಣದಲ್ಲಿ ಭೂಗತ ಜಗತ್ತಿನ ಕೆಲವು ರಹಸ್ಯ ವ್ಯವಹಾರಗಳಿಗೆ ಕೆಲವು ರಾಜಕೀಯ ಲಿಂಕ್‌ಗಳನ್ನು ಸಹ ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಮತ್ತು ಕೆಲವು ಸ್ವತಂತ್ರ ಗುಪ್ತಚರ ಮಾಹಿತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂಬೈನ ಹಲವಾರು ಆಸ್ತಿಗಳಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
202ರ ಡಿಸೆಂಬರ್ ತಿಂಗಳಲ್ಲಿ ಭೂಗತ ಪಾತಕಿ ದಾವೂದ್‌ನ ಮಹಾರಾಷ್ಟ್ರದ ರತ್ನಗಿರಿಯಲ್ಲಿದ್ದ ಆಸ್ತಿ 1.10 ಕೋಟಿಗೆ ಹರಾಜು ಹಾಕಲಾಗಿತ್ತು. 30 ಗುಂಟೆಯ ಪ್ಲಾಟ್ ಹಾಗೂ 50 ಗುಂಟೆಯಲ್ಲಿರುವ ಕಟ್ಟಡ ಹೆಸರಾಂತ ಬಿಡ್ಡರ್ ರವೀಂದ್ರ ಕಾಟೆಯವರ ಪಾಲಾಗಿದೆ.












Click it and Unblock the Notifications