Breaking: ಸಿಎಂ ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆ ಬಹಿರಂಗ ಪತ್ರ
ಮುಂಬೈ, ಜೂನ್ 23: ಮಹಾರಾಷ್ಟ್ರದಲ್ಲಿ ರಾಜಕೀಯದ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ರಾಜ್ಯ ರಾಜಕೀಯ ಬೆಳವಣಿಗೆ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿರುವ ಏಕನಾಥ್ ಶಿಂಧೆ ಸಿಎಂಗೆ ಮೂರು ಪುಟಗಳ ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಈ ಮೂರು ಪುಟಗಳ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ही आहे आमदारांची भावना... pic.twitter.com/U6FxBzp1QG
— Eknath Shinde - एकनाथ शिंदे (@mieknathshinde) June 23, 2022
ಕಳೆದ ಎರಡೂವರೆ ವರ್ಷಗಳಲ್ಲಿ ಶಿವಸೇವೆ ಶಾಸಕರ ಪಾಲಿಗೆ ವರ್ಷಾ ಮನೆ ಬಾಗಿಲು ಮುಚ್ಚಿದಂತೆ ಆಗಿದೆ ಎಂದು ಬಂಡಾಯ ಶಾಸಕ ಏಕನಾಥ್ ಶಿಂಧೆ ಅಸಮಾಧಾನ ಹೊರ ಹಾಕಿದ್ದಾರೆ. ಅವರು ಬರೆದಿರುವ ಪತ್ರದಲ್ಲಿ ಏನೆಲ್ಲಾ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸಿಎಂ ಸುತ್ತಲಿನ ಜನರೇ ಎಲ್ಲ ನಿರ್ಧಾರ ತೆಗೆದುಕೊಳ್ಳುತ್ತಿದ್ದರು
"ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನ್ನು ಭೇಟಿ ಮಾಡುವುದಕ್ಕೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಸಿಎಂ ಸುತ್ತಲಿರುವ ಜನರೇ ನಾವು ಅವರನ್ನು ಭೇಟಿ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಿದ್ದರು. ಸಿಎಂ ಭೇಟಿಗೆ ತೆರಳಿದಾಗಲೆಲ್ಲ ನಾವು ಅವಮಾನವನ್ನು ಎದುರಿಸುವಂಥ ಸ್ಥಿತಿ ಇತ್ತು. ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷದವರೇ ನಮ್ಮ ಪಾಲಿನ ಪ್ರತಿಪಕ್ಷ ನಾಯಕರಂತೆ ವರ್ತಿಸುತ್ತಿದ್ದರು. ಆ ಪಕ್ಷದ ಶಾಸಕರು ನಿರಾಯಾಸವಾಗಿ ಸಿಎಂ ಅನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿತ್ತು, ಅಲ್ಲದೇ ಆ ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ನಿಧಿ ಒದಗಿಸಲಾಗುತ್ತಿತ್ತು," ಎಂದು ಏಕನಾಥ್ ಶಿಂಧೆ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಸಿಎಂ ಠಾಕ್ರೆ ಸೆಕ್ರೆಟರಿಯೇಟ್‌ನಲ್ಲಿ ಇರುತ್ತಿರಲಿಲ್ಲ
ಸಿಎಂ ಉದ್ಧವ್ ಠಾಕ್ರೆ ಯಾವತ್ತೂ ಸೆಕ್ರೆಟರಿಯೇಟ್‌ನಲ್ಲಿ ಇರುತ್ತಿರಲಿಲ್ಲ. ಅದರ ಬದಲಾಗಿ ತಮ್ಮ ಮಾತೋಶ್ರೀ ನಿವಾಸದಲ್ಲಿಯೇ ಇರುತ್ತಿದ್ದರು. ನಾವು ಸಿಎಂ ಸುತ್ತಲಿನವರಿಗೆ ಕರೆ ಮಾಡುತ್ತಿದ್ದೆವು, ಆದರೆ ಅವರು ನಮ್ಮ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಈ ಎಲ್ಲ ಸಂಗತಿಗಳಿಂದ ಬೇಸತ್ತು, ಶಿಸ್ತುಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದೇವೆ," ಎಂದು ಪತ್ರದ ಇನ್ನೊಂದು ಅಂಶದಲ್ಲಿ ಹೇಳಲಾಗಿದೆ.

ನಮ್ಮನ್ನು ಅಯೋಧ್ಯೆಗೆ ಭೇಟಿ ನೀಡದಂತೆ ತಡೆದಿದ್ದು ಏಕೆ?
ಹಿಂದುತ್ವ ಮತ್ತು ರಾಮಮಂದಿರವು ಶಿವಸೇನೆ ಪಕ್ಷದ ಮಟ್ಟಿಗೆ ನಿರ್ಣಾಯಕ ವಿಷಯವಾಗಿದೆ. ಹೀಗಿರುವಾಗ ನಮ್ಮ ಪಕ್ಷವೇ ನಮ್ಮನ್ನು ಅಯೋಧ್ಯೆಗೆ ಭೇಟಿ ನೀಡದಂತೆ ತಡೆ ಹಿಡಿದಿದ್ದು ಏಕೆ ಎಂದು ಏಕನಾಥ್ ಶಿಂಧೆ ಪ್ರಶ್ನೆ ಮಾಡಿದ್ದಾರೆ. ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಶಾಸಕರನ್ನು ಕರೆಸಿ ಅಯೋಧ್ಯೆಗೆ ಹೋಗದಂತೆ ತಡೆಯಲಾಯಿತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏಕನಾಥ್ ಶಿಂಧೆಗೆ ಎಷ್ಟು ಶಾಸಕರ ಬೆಂಬಲವಿದೆ?
ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಪರವಾಗಿ ನಿಂತ ಶಾಸಕರ ಸಂಖ್ಯೆಯು 36ಕ್ಕೆ ಏರಿಕೆ ಆಗಿದೆ. ಪಕ್ಷದ ಒಟ್ಟು 55 ಶಾಸಕರಲ್ಲಿ 36 ಶಾಸಕರ ಬೆಂಬಲವನ್ನು ಶಿಂಧೆ ಹೊಂದಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಮಣಿಸುವುದಕ್ಕೆ ಇನ್ನೊಂದು ಸ್ಥಾನವಷ್ಟೇ ಬಾಕಿ ಉಳಿದಿದೆ. ಅನರ್ಹತೆಯ ಶಿಕ್ಷೆ ಇಲ್ಲದೇ ಪಕ್ಷ ವಿಭಜನೆಗೆ ಮೂರರ ಎರಡರಷ್ಟು ಬೆಂಬಲವನ್ನು ಹೊಂದಿರಬೇಕಿದೆ. ಆ ಲೆಕ್ಕದಲ್ಲಿ 37 ಶಾಸಕರ ಬೆಂಬಲಕ್ಕೆ ಇನ್ನೊಂದು ಸ್ಥಾನವಷ್ಟೇ ಬೇಕಾಗುತ್ತದೆ.












Click it and Unblock the Notifications