ಗಡ್ಕರಿಗೆ ಮಹಾರಾಷ್ಟ್ರ ಸಿಎಂ ಆಗುವ ಯೋಗ?
ಮುಂಬೈ, ಅ.22: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಾಗೂ ಸಿಎಂ ಆಯ್ಕೆ ಪ್ರಕ್ರಿಯೆಯನ್ನು ದೀಪಾವಳಿ ನಂತರ ನಡೆಸಲಾಗುವುದು ಎಂದು ವೀಕ್ಷಕರಾದ ರಾಜನಾಥ್ ಸಿಂಗ್ ಘೋಷಿಸಿರಬಹುದು. ಅದರೆ, ಮಹಾರಾಷ್ಟ್ರ ಬಿಜೆಪಿ ಘಟಕ ಮಂಗಳವಾರ ರಾತ್ರಿ ನಿತಿನ್ ಗಡ್ಕರಿ ಹೆಸರನ್ನು ತೇಲಿ ಬಿಡುವ ಮೂಲಕ ಹೊಸ ತಿರುವು ನೀಡಿದೆ. ಇಷ್ಟಕ್ಕೂ ಸಿಎಂ ಆಗಲ್ಲ ಆಗಲ್ಲ ಎನ್ನುತ್ತಿದ್ದ ಗಡ್ಕರಿ ಅವರಿಗೆ ಸಿಎಂ ಆಗುವ ಯೋಗ ಸಿಕ್ಕಿದ್ದಾದರೂ ಏಕೆ? ಎಂಬ ಪ್ರಶ್ನೆ ಎದ್ದಿದೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಕೇಂದ್ರ ಸಚಿವ ನಿತನ್ ಗಡ್ಕರಿ ಅವರನ್ನು ಆಯ್ಕೆ ಮಾಡುವಂತೆ ಹೈಕಮಾಂಡ್ ಗೆ ರಾಜ್ಯ ಬಿಜೆಪಿ ಘಟಕ ಒತ್ತಾಯಿಸಿದೆ.ಮಹಾರಾಷ್ಟ್ರ ಬಿಜೆಪಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಸುಧೀರ್ ಮುಂಗತಿವಾರ್ ಅವರು ಗಡ್ಕರಿ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಆರೆಸ್ಸೆಸ್ ನಂಟು: ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ನಿನ್ನೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದರು. ನಂತರ ಈ ಬಗ್ಗೆ ಸುಧೀರ್ ಅವರು ಹೇಳಿಕೆ ನೀಡಿದ್ದಾರೆ. ಹರ್ಯಾಣ ಸಿಎಂ ಆಯ್ಕೆಯಲ್ಲಿ ಮಹತ್ವದ ಪಾತ್ರವಹಿಸಿದ ಆರೆಸ್ಸೆಸ್ ಮಹಾರಾಷ್ಟ್ರದಲ್ಲೂ ಆರೆಸ್ಸೆಸ್ ನಿಷ್ಠಾವಂತರನ್ನು ಸಿಎಂ ಸ್ಥಾನದಲ್ಲಿ ಕೂರಿಸುವ ಯೋಜನೆ ಹಾಕಿಕೊಂಡಿದೆ.
ಒಂದು ವೇಳೆ ನಿತಿನ್ ಗಡ್ಕರಿ ಅವರು ಮಹಾರಾಷ್ಟ್ರ ಸಿಎಂ ಆಗಲು ಒಪ್ಪದಿದ್ದರೆ, ಸುಧೀರ್ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆಯೂ ಇದೆ. ಫಡ್ನಾವೀಸ್ ಗಿಂತ ಆರೆಸ್ಸೆಸ್ ಜೊತೆ ನಿಕಟ ಸಂಪರ್ಕ ಹೊಂದಿರುವ ಸುಧೀರ್ ಅವರು ಸಿಎಂ ಸ್ಥಾನಕ್ಕೆ ಆಯ್ಕೆಯಾದರೂ ಅಚ್ಚರಿಯೇನಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.
ರೇಸಿನಲ್ಲಿ ಯಾರಿದ್ದಾರೆ?: ಮಹಾರಾಷ್ಟ್ರ ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಮುಖವಾಗಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನಾವಿಸ್ ಮತ್ತು ದಿ.ಗೋಪಿನಾಥ್ ಮುಂಡೆ ಅವರ ಮಗಳಾದ ಪಂಕಜಾ ಮುಂಡೆ ಅವರ ಹೆಸರುಗಳ ಬಲವಾಗಿ ಕೇಳಿಬರುತ್ತಿದೆ. ಇವರಷ್ಟೇ ಅಲ್ಲದೇ ಪಕ್ಷ ಹಿರಿಯ ಮುಖಂಡರಾದ ಏಕನಾಥ್ ಖಡ್ಸೆ ಮತ್ತು ವಿನೋದ್ ತಾವ್ಡೆ ಅವರ ಹೆಸರು ಕೂಡ ಸಿಎಂ ರೇಸ್‌ನಲ್ಲಿ ಕೇಳಿಬರುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಆಯ್ಕೆ ಮಾಡುವ ಹೊಣೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಜೆಪಿ ನಡ್ಡಾ ಅವರಿಗೆ ನೀಡಲಾಗಿದ್ದು, ದೀಪಾವಳಿ ನಂತರ ಮುಂಬೈಗೆ ಆಗಮಿಸಿ ನಿರ್ಣಯ ಕೈಗೊಳ್ಳಲಿದ್ದಾರೆ.












Click it and Unblock the Notifications