ಎಂಬಿಎ ಪದವೀಧರ ದಂಪತಿಗಳ ರಸ್ತೆ ಬದಿ ಕ್ಯಾಂಟೀನ್
ಮುಂಬೈ, ಅಕ್ಟೋಬರ್ 04 : ಅವರಿಬ್ಬರೂ ಎಂಬಿಎ ಪದವೀಧರರು. ಕೈ ತುಂಬಾ ಸಂಬಳ ಬರುವ ಕೆಲಸವಿದೆ. ಆದರೆ, ಮುಂಜಾನೆ 4 ಗಂಟೆಯಿಂದ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಾರೆ. ಈ ದಂಪತಿಗಳ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಅಶ್ವಿನಿ ಶೆಣೈ ಮತ್ತು ಅವರ ಪತಿ ಮುಂಬೈನ ಕಂಡಿವಲಿ ರೈಲ್ವೆ ನಿಲ್ದಾಣದ ಬಳಿ ಕ್ಯಾಂಟೀನ್ ನಡೆಸುತ್ತಾರೆ. ಇಬ್ಬರೂ ಎಂಬಿಎ ಪದವೀಧರರಾಗಿದ್ದು, ಕೆಲಸಕ್ಕೆ ಹೋಗುವ ಮೊದಲು ರಸ್ತೆ ಬದಿಯಲ್ಲಿ ಆಹಾರ ಮಾರಾಟ ಮಾಡುತ್ತಾರೆ.
ಬೆಳಗ್ಗೆ 4 ಗಂಟೆಯಿಂದ 10 ಗಂಟೆ ತನಕ ಉಪ್ಪಿಟ್ಟು, ಇಡ್ಲಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ಬಳಿಕ ಇಬ್ಬರೂ ಕೆಲಸಕ್ಕೆ ಹೊರಟು ಹೋಗುತ್ತಾರೆ. ದೀಪಾಲಿ ಭಾಟಿಯಾ ಎನ್ನುವವರು ದಂಪತಿಗಳ ಕಾರ್ಯವನ್ನು ಫೇಸ್ ಬುಕ್ ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ.

ಗಾಂಧಿ ಜಯಂತಿ ದಿನದಂದು ಬೆಳಗ್ಗೆ ಉತ್ತಮ ಉಪಹಾರಕ್ಕಾಗಿ ದೀಪಾಲಿ ಹುಡುಕಾಟ ನಡೆಸಿದಾಗ ಅಶ್ವಿನಿ ಶೆಣೈ ದಂಪತಿಗಳ ರಸ್ತೆ ಬದಿ ಕ್ಯಾಂಟೀನ್ ಸಿಕ್ಕಿದೆ. ಉಪಹಾರದ ರುಚಿಗೆ ಮಾರುಹೋದ ಅವರು ದಂಪತಿಗಳ ಬಗ್ಗೆ ಹೆಚ್ಚಿನ ವಿಚಾರವನ್ನು ತಿಳಿದುಕೊಂಡಾಗ ಅವರ ಮಾನವೀಯ ಕಾರ್ಯ ಬೆಳಕಿಗೆ ಬಂದಿದೆ.
ಅಶ್ವಿನಿ ಶೆಣೈ ಮತ್ತು ಅವರ ಪತಿ ಕೆಲಸಕ್ಕೆ ಹೋಗುವ ಮೊದಲು ತಮ್ಮ ಮನೆ ಕೆಲಸದವಳು ಮಾಡಿದ ಅಡುಗೆಯನ್ನು ರಸ್ತೆ ಬದಿಯಲ್ಲಿ ಮಾರುತ್ತಾರೆ. ಕೆಲಸದಾಕೆಗೆ 55 ವರ್ಷ ಆಕೆಯ ಪತಿ ಪಾರ್ಶ್ವವಾಯು ಪೀಡಿತರು. ಅವರಿಗೆ ಸಹಾಯಕವಾಗಲಿ ಎಂದು ದಂಪತಿಗಳು ಆಹಾರ ಮಾರುತ್ತಾರೆ.
ಕೆಲಸದಾಕೆ ಹಣಕ್ಕಾಗಿ ಪರದಾಡುವುದು ಬೇಡ ಎಂದು ದಂಪತಿಗಳು ಕ್ಯಾಂಟೀನ್‌ನಲ್ಲಿ ಆಕೆ ಮಾಡಿದ ಆಹಾರಗಳನ್ನು ಮಾರಿ ಹಣವನ್ನು ಆಕೆಗೆ ಕೊಡುತ್ತಾರೆ. ದೀಪಾಲಿ ಭಾಟಿಯಾ ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ದೀಪಾಲಿ ಭಾಟಿಯಾ ಅವರ ಫೇಸ್ ಬುಕ್ ಫೋಸ್ಟ್ ವೈರಲ್ ಆಗಿದೆ. 5.5 ಸಾವಿರ ಜನರು ಇದನ್ನು ಶೇರ್ ಮಾಡಿದ್ದಾರೆ. 13 ಸಾವಿರ ಜನರು ಲೈಕ್ ಮಾಡಿದ್ದಾರೆ.












Click it and Unblock the Notifications