Breaking; ಜೈಲಲ್ಲಿ ಮನೆ ಊಟಕ್ಕೆ ಬೇಡಿಕೆ, ನವನೀತ್ ಕೌರ್ ಅರ್ಜಿ ವಜಾ
ಮುಂಬೈ, ಏಪ್ರಿಲ್ 29 ; ನ್ಯಾಯಾಂಗ ಬಂಧನದಲ್ಲಿರುವ ಅಮರಾವತಿ ಕ್ಷೇತ್ರದ ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರವಿ ರಾಣಾ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಮುಂಬೈನ ಸೆಷನ್ಸ್ ಕೋರ್ಟ್ ಶುಕ್ರವಾರ ದಂಪತಿಗಳ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಇಬ್ಬರೂ ಸಹ ಜೈಲಿನಲ್ಲಿ ಮನೆಯ ಊಟ ಪಡೆಯಲು ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸವ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ನವನೀತ್ ಕೌರ್ ರಾಣಾ ಮತ್ತು ಆಕೆಯ ಪತಿ ರವಿ ರಾಣಾರನ್ನು ಪೊಲೀಸರು ಬಂಧಿಸಿದ್ದರು. ಇಬ್ಬರನ್ನೂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಳೆದ ಭಾನುವಾರ ಆದೇಶ ಹೊರಡಿಸಿತ್ತು.

ಈ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ದಂಪತಿಗಳು ಕೋರಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿತ್ತು. ಸೆಷನ್ಸ್ ಕೋರ್ಟ್‌ನಲ್ಲಿ ದಂಪತಿಗಳು ಜಾಮೀನು ಅರ್ಜಿ ಸಹ ಸಲ್ಲಿಕೆ ಮಾಡಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಹನುಮಾನ್ ಚಾಲೀಸಾ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಇದೇ ವಿಚಾರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ.
ಕಳೆದ ಶುಕ್ರವಾರ ನವನೀತ್ ಕೌರ್ ರಾಣಾ, ಆಕೆಯ ಪತಿ ರವಿ ರಾಣಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದರು. ಶನಿವಾರ ಶೀವಸೇನೆ ಕಾರ್ಯಕರ್ತರು ಸಂಸದೆ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು.
ಬಳಿಕ ದಂಪತಿಗಳು ಪತ್ರಿಕಾಗೋಷ್ಠಿ ನಡೆಸಿ ತಮ್ಮ ತೀರ್ಮಾನ ವಾಪಸ್ ಪಡೆದಿರುವುದಾಗಿ ಘೋಷಣೆ ಮಾಡಿದ್ದರು. ಆದರೆ ಶನಿವಾರ ರಾತ್ರಿ ಪೊಲೀಸರು ದಂಪತಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.












Click it and Unblock the Notifications