ಗುದ್ದೋಡು ಪ್ರಕರಣ: ಸಲ್ಮಾನ್ ಖಾನ್ ಇನ್ ಟ್ರಬಲ್
ಮುಂಬೈ, ಡಿ.3: ತಂಗಿ ಮದುವೆ ಮುಗಿಸಿಕೊಂಡು ಶೂಟಿಂಗ್ ಗಳಲ್ಲಿ ನಿರತರಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕಹಿ ಸುದ್ದಿ ಸಿಕ್ಕಿದೆ. 2002ರ ಗುದ್ದೋಡು ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಸಲ್ಮಾನ್ ಅವರ ಆಲ್ಕೋಹಾಲ್ ಪರೀಕ್ಷೆ ವರದಿ ಬಂದಿದ್ದು, ಸಲ್ಲೂಗೆ ಮುಳುವಾಗುವಂತಿದೆ.
48 ವರ್ಷ ವಯಸ್ಸಿನ ನಟ ಸಲ್ಮಾನ್ ಖಾನ್ ಅವರು ಮುಂಬೈ ಸೆಷನ್ಸ್ ಕೋರ್ಟಿನಲ್ಲಿ ಬುಧವಾರ ಖುದ್ದು ಹಾಜರಾಗಿದ್ದರು. ಈ ಸಂದರ್ಭದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆಲ್ಕೋಹಾಲ್ ಪರೀಕ್ಷಾ ವರದಿಯನ್ನು ಕೋರ್ಟಿಗೆ ಸಲ್ಲಿಸಿದರು. [ಸಲ್ಲೂ ಕೃಷ್ಣ ಮೃಗ ಬೇಟೆ ಕೇಸ್ ಅಪ್ಡೇಟ್ಸ್]
ವರದಿ ಪ್ರಕಾರ ಘಟನೆ ನಡೆದ ದಿನ ಸಲ್ಮಾನ್ ಖಾನ್ ಅವರ ದೇಹದ ರಕ್ತದಲ್ಲಿ ಮದ್ಯದ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿತ್ತು ಎಂದು ತಿಳಿದು ಬಂದಿದೆ. ತಜ್ಞರ ಹೇಳಿಕೆ ಪ್ರಕಾರ ರಕ್ತದಲ್ಲಿ ಆಲ್ಕೋಹಾಲ್ ಅಂಶ 30 ಮಿಲಿ ಗ್ರಾಮ್ ನಷ್ಟಿರಬಹುದು. ಅದರೆ, ಸಲ್ಮಾನ್ ಅವರ ರಕ್ತದಲ್ಲಿ 62 ಮಿಲಿಗ್ರಾಂನಷ್ಟಿದೆ. ಹೀಗಾಗಿ ಸಲ್ಮಾನ್ ಖಾನ್ ಅವರು ಘಟನೆ ನಡೆದ ವೇಳೆ ಕಾರಿನಲ್ಲಿದ್ದರು ಹಾಗೂ ವಾಹನ ಚಲಾಯಿಸುವಾಗ ಕುಡಿದಿದ್ದರು ಎಂಬುದಕ್ಕೆ ಪುರಾವೆ ಸಿಕ್ಕಿದ್ದಂತಾಗಿದೆ.

ನ.24ರ ವಿಚಾರಣೆಗೆ ಸಲ್ಲೂ ಹಾಜರಾಗಿರಲಿಲ್ಲ. ಅದರೆ, ಅಂದು ಲಾಂಡ್ರಿ ಮ್ಯಾನೇಜರ್ ಹಾಗೂ ಮತ್ತೊಬ್ಬ ಸಾಕ್ಷಿಯನ್ನು ಕೋರ್ಟ್ ವಿಚಾರಣೆಗೊಳಪಡಿಸಿತ್ತು. ಸೆ.28, 2002ರಂದು ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ರೋವರ್ ವಾಹನ ಅಡ್ಡಾದಿಡ್ಡಿ ಚಲಿಸಿ ಫುಟ್ ಪಾತ್ ನಲ್ಲಿದ್ದ ಒಬ್ಬ ವ್ಯಕ್ತಿ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ನಾಲ್ವರ ಗಾಯಗೊಂಡಿದ್ದರು.
2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಕಾರು ಚಾಲನೆ ಮಾಡಿದ ವೇಳೆ ಸಲ್ಮಾನ್ ಅವರು ಕುಡಿದಿರಲಿಲ್ಲ. ಘಟನೆ ನಂತರ ನಾನು ಅವರನ್ನು ಭೇಟಿ ಮಾಡಿದ್ದೆ ಎಂದು ಪ್ರತ್ಯಕ್ಷದರ್ಶಿ ಇತ್ತೀಚಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದರಿಂದ ಪ್ರಕರಣಕ್ಕೆ ತಿರುವು ಸಿಕ್ಕಿತ್ತು.
ಗಾಡಿನ ವಿಮೆ ಏಜೆಂಟ್ ಹೇಳಿಕೆ ನೀಡಿ ವಾಹನ ವಿಮೆ ಸಲ್ಮಾನ್ ಹೆಸರಿನಲ್ಲಿಲ್ಲ. ಈ ವಾಹನ ಮತ್ತೊಬ್ಬರಿಂದ ಖರೀದಿಸಿದ್ದಾರೆ. ಅವರ ಹೆಸರಿನಲ್ಲಿ ವಿಮೆ ಇದೆ ಎಂದಿದ್ದಾರೆ. ಇನ್ನೂ 11 ಜನ ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಸಲ್ಮಾನ್ ಖಾನ್ ಅವರ ಭವಿಷ್ಯ ನಿರ್ಧಾರ ಏನಾಗುವುದೋ ಕಾದು ನೋಡಬೇಕಿದೆ.(ಪಿಟಿಐ)












Click it and Unblock the Notifications