7 ವರ್ಷದ ಬಾಲಕಿ ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್!
ಮುಂಬೈ, ಫೆ. 14: ಈ ಬಾಲಕಿಗೆ ಇನ್ನೂ 7 ವರ್ಷ ವಯಸ್ಸು. ಮೂರನೇ ತರಗತಿ ವಿದ್ಯಾರ್ಥಿನಿ. ಆಡುವ ವಯಸ್ಸಿನಲ್ಲಿ ಆಕೆಯ ಕನಸು ಪೊಲೀಸ್ ಅಧಿಕಾರಿಯಾಗಬೇಕು ಎಂಬುದು. ಆದರೆ, ವಿಧಿ ಆಟವೇ ಬೇರೆ ಇತ್ತು. ಆ ಎಳೆ ಕಂದನಿಗೆ ಕ್ಯಾನ್ಸರ್ ಎಂಬ ಕಾಯಿಲೆ ಅಂಟಿಸಿಬಿಟ್ಟಿದೆ.
ಅವಳ ಹೆಸರು ಮಾಹೆಕ್ ಸಿಂಗ್. ಉತ್ತರದ ಪ್ರದೇಶದ ಪ್ರತಾಪ್‌ಘಡ ನಿವಾಸಿ. ಇನ್ನೂ ಕನಸು ಕಾಣುವ ಈಕೆಗೆ ತಾನು ಸಾವಿನತ್ತ ಜಾರುತ್ತಿದ್ದೇನೆಂಬ ಅರಿವಿಲ್ಲ. ಎಲುಬಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಈಕೆಯ ಕನಸನ್ನು ಸಾಕಾರಗೊಳಿಸಲು ಎನ್‌ಜಿಓ ಸಂಸ್ಥೆಯಾದ ಮೇಕ್-ಎ-ವಿಶ್ ಫೌಂಡೇಶನ್ ಆಫ್ ಇಂಡಿಯಾ ಮಾಡಿದ ಯತ್ನಕ್ಕೆ ಟಾಟಾ ಮೆಮೋರಿಯಲ್ ಸೆಂಟರ್ ಹಾಗೂ ಮುಂಬೈ ಪೊಲೀಸರು ಕೈಜೋಡಿಸಿದರು. [ಚಂದನ್ ಹೋರಾಟಕ್ಕೆ ಅಂತ್ಯ ಹಾಡಿದ ಕ್ಯಾನ್ಸರ್]
ಬಾಲಕಿ ಮಾಹೆಕ್ ಸಿಂಗ್‌ಳಿಗೆ ಪೊಲೀಸ್ ಬಟ್ಟೆ ತೊಡಿಸಲಾಯಿತು. ಶುಕ್ರವಾರ ಮಧ್ಯಾಹ್ನ 12.09 ಗಂಟೆಗೆ ಹಿರಿಯ ಪೊಲೀಸ್ ನಿರೀಕ್ಷಕಳಾಗಿ ಅಧಿಕಾರ ವಹಿಸಿಕೊಂಡ ಮಾಹೆಕ್ ಮೊದಲು ಶಾಂತಿ ಪತ್ರಕ್ಕೆ ಸಹಿ ಮಾಡಿದಳು. ಅಧಿಕಾರಿಯ ಕುರ್ಚಿಯಲ್ಲಿ ಕುಳಿತ ಮಾಹೆಕ್‌ಳಿಗೆ ಪೊಲೀಸ್ ಅಧಿಕಾರಿಗಳು ಸೆಲ್ಯೂಟ್ ಹೊಡೆದರು.

ದೇಶವನ್ನು ರಕ್ಷಿಸುತ್ತೇನೆ : ಪೊಲೀಸ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಾಲಕಿ ಮಾಹೆಕ್ "ನನಗೆ ದೇಶದ ರಕ್ಷಣೆ ಮಾಡಬೇಕಾಗಿದೆ. ನನಗೆ ದೇಶವನ್ನು ಗೂಂಡಾಗಳಿಂದ ಸ್ವತಂತ್ರಗೊಳಿಸಬೇಕಾಗಿದೆ" ಎಂದು ತನ್ನ ಮುಗ್ಧ ಮಾತುಗಳಿಂದ ಕನಸನ್ನು ಹೇಳಿಕೊಂಡಳು. [10 ವರ್ಷದ ಬಾಲಕ ಹೈದರಾಬಾದ್ ಪೊಲೀಸ್ ಕಮೀಶನರ್]
ನಂತರ ಪೊಲೀಸ್ ದಿರಿಸಿನಲ್ಲಿಯೇ ದಾದರ್-ಪ್ಯಾರೆಲ್ ಕ್ಷೇತ್ರದಲ್ಲಿ ಗಸ್ತು ತಿರುಗಿದಳು. ನಂತರ ಪೊಲೀಸ್ ಠಾಣೆಗೆ ವಾಪಸ್ ಬಂದ ಮಾಹೆಕ್‌ಳಿಗೆ ಹಿರಿಯ ಪೊಲೀಸ್ ನಿರೀಕ್ಷಕ ಸುನಿಲ್ ತೋಂಡವಾಲ್ಕರ್ ಹಾಗೂ ಇತರ ಅಧಿಕಾರಿಗಳು ಸೆಲ್ಯೂಟ್ ಹೊಡೆದು ಸ್ವಾಗತಿಸಿದರು. ಸಾವಿನ ದವಡೆಯತ್ತ ಸಾಗುತ್ತಿರುವ ಮಾಹೆಕ್‌ಳ ಆಸೆಯನ್ನು ಪೊಲೀಸ್ ಇಲಾಖೆ ನೆರವೇರಿಸಿತು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸರು, "ಬಾಲಕಿ ಮಾಹೆಕ್‌ಳ ಆಸೆ ಕುರಿತು ನಮಗೆ ತಿಳಿದುಬಂದಾಗ ನಾವು ಮೊದಲು ಹಿರಿಯ ಅಧಿಕಾರಿಗಳಲ್ಲಿ ಅನುಮತಿ ಪಡೆದೆವು" ಎಂದು ತಿಳಿಸಿದ್ದಾರೆ. [ಗಂಗೆಯಲ್ಲಿ ಮುಳುಗೆದ್ದರೆ ಕ್ಯಾನ್ಸರ್ ಬಂದೀತು]
ಮಾಹೆಕ್‌ಳ ಪಾಲಕರು ಆಕೆಯನ್ನು ಪ್ರತಿ ಮೂರು ತಿಂಗಳುಗಳಿಗೊಮ್ಮೆ ಮಾಹೆಕ್‌ಳ ಚಿಕಿತ್ಸೆಗಾಗಿ ಉತ್ತರ ಪ್ರದೇಶದಿಂದ ಮುಂಬೈಗೆ ಬರುತ್ತಾರೆ. ಓರ್ವ ಇಲೆಕ್ಟ್ರಿಶಿಯನ್ ಆಗಿರುವ ವಿನಯ್ ಅವರದ್ದು ತಿಂಗಳಿಗೆ ಅತ್ಯಂತ ಕಡಿಮೆ ಆದಾಯ. ಈಗ ಮಗಳಿಗೆ ಕ್ಯಾನ್ಸರ್ ರೋಗ ಅಂಟಿರುವ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ವಿನಯ್ ಹೇಳಿದ್ದಾರೆ.












Click it and Unblock the Notifications