ಮನಿ ಲಾಂಡ್ರಿಂಗ್: ದಾವೂದ್ ಸೋದರಿ ಹಸೀನಾ ಮನೆ ಮೇಲೆ 'ಇಡಿ' ದಾಳಿ
ಮುಂಬೈ, ಫೆ.16: ಮನಿಲಾಂಡ್ರಿಂಗ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೋದರಿ ಹಸೀನಾ ಪಾರ್ಕರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ತಂಡ ದಾಳಿ ನಡೆಸಿದೆ. ದಾವೂದ್ ಗ್ಯಾಂಗ್ ಗೆ ಸಂಬಂಧಿಸಿದ ಅನೇಕ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಮೂಲಗಳ ಪ್ರಕಾರ ಭೂಗತ ಜಗತ್ತಿನ ಹಲವಾರು ಲಿಂಕ್‌ಗಳು, ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳೊಂದಿಗೆ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹುಡುಕಾಟ ನಡೆಸುತ್ತಿದೆ. ಈ ದಾಳಿಯಲ್ಲಿ ಹಸೀನಾ ಪಾರ್ಕರ್ ಅವರ ಆಸ್ತಿಯೂ ಸೇರಿದೆ.
''ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಮುಂಬೈನಲ್ಲಿ ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಇಡಿ ಶೋಧ ನಡೆಸುತ್ತಿದೆ. ಕೆಲವು ಭೂಗತ ಪಾತಕಿಗಳು ಮತ್ತು ರಾಜಕಾರಣಿಗಳು ಸಹ ತನಿಖೆಯಲ್ಲಿದ್ದಾರೆ, '' ಎಂದು ಎಎನ್‌ಐ ವರದಿಗಳ ಪ್ರಕಾರ ಮೂಲಗಳು ಸೇರಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆ ವ್ಯಕ್ತಿ ಭೂಗತ ಜಗತ್ತಿನ ನಂಟು ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ. ವ್ಯಕ್ತಿಯ ಗುರುತು ಮತ್ತು ಹೆಸರನ್ನು ಇಡಿ ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಭೂಗತ ಲೋಕಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಜಧಾನಿಯಲ್ಲಿ ಇಂತಹ ಹತ್ತು ಸ್ಥಳಗಳನ್ನು ಗುರುತಿಸಿದ್ದು, ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಇಡಿ ನಿರ್ಧರಿಸಿದೆ. ಇದಲ್ಲದೆ, ಈ ಪ್ರಕರಣದಲ್ಲಿ ಭೂಗತ ಜಗತ್ತಿನ ಕೆಲವು ರಹಸ್ಯ ವ್ಯವಹಾರಗಳಿಗೆ ಕೆಲವು ರಾಜಕೀಯ ಲಿಂಕ್‌ಗಳನ್ನು ಸಹ ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಮತ್ತು ಕೆಲವು ಸ್ವತಂತ್ರ ಗುಪ್ತಚರ ಮಾಹಿತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂಬೈನ ಹಲವಾರು ಆಸ್ತಿಗಳಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಾಧ್ಯಮ ವರದಿಗಳ ಪ್ರಕಾರ, ಅಕ್ರಮ ಹಣ ವರ್ಗಾವಣೆ ತಡೆ ಸಂಸ್ಥೆಯು ಮುಂಬೈ ಭೂಗತ ಜಗತ್ತಿನ ಹವಾಲಾ, ಸುಲಿಗೆ ಮತ್ತು ಅಕ್ರಮ ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಹುಡುಕುತ್ತಿದೆ.
202ರ ಡಿಸೆಂಬರ್ ತಿಂಗಳಲ್ಲಿ ಭೂಗತ ಪಾತಕಿ ದಾವೂದ್‌ನ ಮಹಾರಾಷ್ಟ್ರದ ರತ್ನಗಿರಿಯಲ್ಲಿದ್ದ ಆಸ್ತಿ 1.10 ಕೋಟಿಗೆ ಹರಾಜು ಹಾಕಲಾಗಿತ್ತು. 30 ಗುಂಟೆಯ ಪ್ಲಾಟ್ ಹಾಗೂ 50 ಗುಂಟೆಯಲ್ಲಿರುವ ಕಟ್ಟಡ ಹೆಸರಾಂತ ಬಿಡ್ಡರ್ ರವೀಂದ್ರ ಕಾಟೆಯವರ ಪಾಲಾಗಿದೆ.












Click it and Unblock the Notifications