ಬೆಂಗಳೂರು ಮೂಲದ ಸ್ಟಾರ್ ಡ್ಯಾನ್ಸರ್ ಸಲ್ಮಾನ್ ವಿರುದ್ಧ ಎಫ್ಐಆರ್
ಮುಂಬೈ, ಫೆಬ್ರವರಿ 03: ಬೆಂಗಳೂರು ಮೂಲದ ಸ್ಟಾರ್ ಡ್ಯಾನ್ಸರ್ ಸಲ್ಮಾನ್ ಯೂಸುಫ್ ಖಾನ್ ವಿರುದ್ಧ ಮುಂಬೈನ ಓಶಿವರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಲ್ಮಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು, ಜನವರಿ 30ರಂದು ದಾಖಲಾದ ದೂರಿನನ್ವಯ ಎಫ್ಐಆರ್ ಹಾಕಲಾಗಿದೆ.
ಸಲ್ಮಾನ್ ಮತ್ತು ಆತನ ಸೋದರ ಸಂಬಂಧಿ ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇಬ್ಬರು ಬೇರೆ ಬೇರೆ ಸ್ಥಳಗಳಲ್ಲಿ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದು, ಸಿನಿಮಾ ಉದ್ಯಮದಲ್ಲಿ ಇದೆಲ್ಲ ಸಾಮಾನ್ಯ. ಈ ವಿಷಯವನ್ನು ಬಹಿರಂಗಗೊಳಿಸಿದರೆ ಚಿತ್ರರಂಗದಲ್ಲಿ ಯಾವುದೇ ಅವಕಾಶ ಸಿಗದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2018ರ ಆಗಸ್ಟ್ ನಲ್ಲಿ ಸಲ್ಮಾನ್ ಅವರ ಮ್ಯಾನೇಜರ್ ಅವರನ್ನು ನಾನು ಸಂಪರ್ಕಿಸಿ ಸಲ್ಮಾನ್ ರನ್ನು ಭೇಟಿ ಮಾಡಲು ಸೂಚಿಸಿದರು. ನಾನು ಲಂಡನ್ನಿಂದ ಮುಂಬೈಗೆ ಬಂದು ಅಂಧೇರಿಯ ಕಾಫಿ ಶಾಪ್ ವೊಂದರಲ್ಲಿ ಸಲ್ಮಾನ್ ಭೇಟಿಯಾದೆ. ಇದಾದ ಬಳಿಕ ಸಲ್ಮಾನ್ ಬಾಲಿವುಡ್ ಪಾರ್ಕ್, ದುಬೈನಲ್ಲಿ ಸಲ್ಮಾನ್ ಅವರ ತಂಡದೊಡನೆ ನರ್ತಿಸುವ ಅವಕಾಶ ಸಿಕ್ಕಿತು. ಆದರೆ, ಒಂದು ದಿನ ಡ್ಯಾನ್ಸ್ ಮಾಡುವ ವೇಳೆ ಸಲ್ಮಾನ್ ನನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಬಾಲಿವುಡ್ ನಲ್ಲಿ ಇದೆಲ್ಲಾ ಕಾಮನ್ ಅಂತ ಹೇಳಿದ್ದರು. ಆಗಸ್ಟ್ 30ರಂದು ಬಹರೇನ್ ನಲ್ಲಿ ಡ್ಯಾನ್ಸ್ ಶೋಗಾಗಿ ನಾವು ತೆರಳಬೇಕಾಗಿತ್ತು.

ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಅವರ ಕಸಿನ್ ಪರಿಚಯವಾಯಿತು. ಪ್ರಯಾಣದ ವೇಳೆ ಸಲ್ಮಾನ್ ಅವರ ಕಸಿನ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ನಂತರ ನನಗೆ ಹಲವು ಬಾರಿ ಕಿರುಕುಳದ ಅನುಭವವಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.
ಖಾಸಗಿ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋನ ವಿಜೇತರಾದ ಸಲ್ಮಾನ್ ಅವರು ಎಬಿಸಿಡಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‍ನಲ್ಲಿ ಕೆಲ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದಲ್ಲದೆ ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.












Click it and Unblock the Notifications