ಬಿಲ್ಡರ್ ಹತ್ಯೆ ಪ್ರಯತ್ನ: ಛೋಟಾ ರಾಜನ್‌ಗೆ ಹತ್ತು ವರ್ಷ ಜೈಲು ಶಿಕ್ಷೆ
ಮುಂಬೈ, ಮಾರ್ಚ್ 16: ಕುಖ್ಯಾತ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2013ರಲ್ಲಿ ಬುಕ್ಕಿ, ಬಿಲ್ಡರ್ ಅಜಯ್ ಗೋಸಾಲಿಯಾ ಕೊಲೆ ಪ್ರಯತ್ನದಲ್ಲಿ ಈ ಶಿಕ್ಷೆ ನೀಡಲಾಗಿದೆ.
ಈ ಹತ್ಯೆ ಪ್ರಯತ್ನ ಪ್ರಕರಣದಲ್ಲಿ ಛೋಟಾ ರಾಜನ್ ಹಾಗೂ ಇತರೆ ಸಹ ಆರೋಪಿಗಳನ್ನು ತಪ್ಪಿತಸ್ಥರು ಎಂದು ಮಂಗಳವಾರ ಪ್ರಕಟಿಸಿದ ನ್ಯಾಯಾಲಯ, ಎಲ್ಲರಿಗೂ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಜತೆಗೆ ರಾಜನ್‌ಗೆ 5 ಲಕ್ಷ ರೂ ದಂಡವನ್ನು ಸಹ ವಿಧಿಸಲಾಗಿದೆ.
52 ವರ್ಷದ ಅಜಯ್ ಗೋಸಾಲಿಯಾ ಅಲಿಯಾಸ್ ಗುಂಡ ಎಂಬ ಬಿಲ್ಡರ್ 2013ರ ಆಗಸ್ಟ್ 28ರಂದು ಮುಂಬೈನ ಮಲಾಡ್‌ನ ಪೂರ್ವಭಾಗ ಇನ್ಫಿನಿಟಿ ಮಾಲ್‌ನಿಂದ ಹೊರ ಬರುತ್ತಿದ್ದಾಗ ಮೂವರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿ ನಡೆಸಲು ತನ್ನ ನಂಬಿಕಸ್ಥ ಸಹಚರ ಸತೀಶ್ ಕಾಲಿಯಾಗೆ ಛೋಟಾ ರಾಜನ್ ಆದೇಶಿಸಿದ್ದ ಎಂದು ಸಿಬಿಐ ಆರೋಪಿಸಿತ್ತು.

ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದರೂ ಗೋಸಾಲಿಯಾ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ. ಆತ ಧರಿಸಿದ್ದ ಚಿನ್ನದ ಸರದ ದೊಡ್ಡ ಪೆಂಡೆಂಟ್‌ಗೆ ಬುಲೆಟ್ ತಗುಲಿದ್ದರಿಂದ ಆತ ಬಚಾವಾಗಿದ್ದ. ಈ ಪ್ರಕರಣದ ಆರೋಪಿಗಳಾಗಿದ್ದ ಪ್ರಕಾಶ್ ನಿಕಂ ಮತ್ತು ಸತೀಶ್ ಕಾಲಿಯಾರನ್ನು ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಬಂಧಿಸಿದ ಬಳಿಕ ಗೋಸಾಲಿಯಾ ಪ್ರಕರಣದ ಆರೋಪಪಟ್ಟಿ ಸಲ್ಲಿಸಲಾಗಿತ್ತು.












Click it and Unblock the Notifications