ಭಾರತದಲ್ಲಿ ಹಕ್ಕುಗಳ ದುರುಪಯೋಗ ಕುರಿತ ಬ್ಲಿಂಕನ್ ಹೇಳಿಕೆಗೆ ಕೇಂದ್ರ ಆಕ್ಷೇಪಿಸಬೇಕಿತ್ತು: ಶರದ್ ಪವಾರ್
ಮುಂಬೈ, ಏಪ್ರಿಲ್ 14: ಭಾರತದಲ್ಲಿ 'ಮಾನವ ಹಕ್ಕುಗಳ ಉಲ್ಲಂಘನೆ ಅಧಿಕ' ಆಗುತ್ತಿರುವ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿಕೆಗೆ ಕೇಂದ್ರ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಬೇಕಿತ್ತು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಹೇಳಿದ್ದಾರೆ.
"ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಮ್ಮ ಸಚಿವರುಗಳ ಸಮ್ಮುಖದಲ್ಲೇ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿಕೆ ನೀಡಿದ್ದಾರೆ. ಇದು ದೇಶಕ್ಕೆ ಬಹಳ ಹಾನಿಕಾರಕವಾಗಿದೆ," ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯಿಸಿದ್ದಾರೆ.
"ಉಭಯ ದೇಶಗಳ ಮುಖ್ಯಸ್ಥರು ಚರ್ಚೆ ನಡೆಸುತ್ತಿರುವಾಗ, ಭಾರತವು ಆಂಟನಿ ಬ್ಲಿಂಕನ್ ಹೇಳಿಕೆಗೆ ವಿರೋಧವನ್ನು ವ್ಯಕ್ತಪಡಿಸಬೇಕಿತ್ತು. ಹಾಗೆಯೇ ಭಾರತದಲ್ಲಿ 'ಮಾನವ ಹಕ್ಕುಗಳ ಉಲ್ಲಂಘನೆ ಅಧಿಕ' ಆಗುತ್ತಿದೆ ಎಂಬ ಆಂಟನಿ ಬ್ಲಿಂಕನ್ ಹೇಳಿಕೆಗೆ ಆಕ್ಷೇಪವನ್ನು ಸಚಿವರುಗಳು ವ್ಯಕ್ತಪಡಿಸಬೇಕಿತ್ತು," ಎಂದು ಪವಾರ್ ಟೀಕೆ ಮಾಡಿದ್ದಾರೆ.

ಆಂಟನಿ ಬ್ಲಿಂಕನ್ ಹೇಳಿದ್ದು ಏನು?
"ಭಾರತದಲ್ಲಿ ಕೆಲವು ಸರ್ಕಾರ, ಪೋಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಕೆಲವು ಇತ್ತೀಚೆಗೆ ಕೆಲವು ಬೆಳವಣಿಗೆಗಳನ್ನು ಅಮೆರಿಕವು ಗಮನಿಸುತ್ತಿದೆ," ಎಂದು ಹೇಳಿದ್ದರು. '
ಸೋಮವಾರ ವಾಷಿಂಗ್ಟನ್‌ನಲ್ಲಿ ನಡೆದ 2+2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯು ಅಂತ್ಯವಾದ ಬಳಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಬ್ಲಿಂಕನ್ ಈ ಹೇಳಿಕೆಗಳನ್ನು ನೀಡಿದರು.
ರಾಜ್ ಠಾಕ್ರೆ ವಿರುದ್ಧ ವಾಗ್ದಾಳಿ
ಬುಧವಾರ ಥಾಣೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶರದ್ ಪವಾರ್ ಅವರು ರಾಜ್ ಠಾಕ್ರೆ ಮೇಲೆ ವಾಗ್ದಾಳಿ ನಡೆಸಿದರು. ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥರು ಬಿಜೆಪಿಯ ಹರಾಜು ಪ್ರಕ್ರಿಯೆಗೆ ಒಳಗಾಗಲಿದ್ದಾರೆ ಎಂದು ಆರೋಪ ಮಾಡಿದರು. ಎಂಎನ್‌ಎಸ್ ಮುಖ್ಯಸ್ಥರು ಬಿಜೆಪಿಯ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಆದರೆ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪ್ರಮುಖ ಘಟಕವಾದ ಎನ್‌ಸಿಪಿಯನ್ನು ಗುರಿಯಾಗಿಸಿದ್ದಾರೆ ಎಂದು ಹೇಳಿದರು. ಹಾಗೆಯೇ ರಾಜ್ ಠಾಕ್ರೆಗೆ ಬಿಜೆಪಿ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನವನ್ನು ರಾಜ್ ಠಾಕ್ರೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಎನ್‌ಸಿಪಿ ಮುಖ್ಯಸ್ಥರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಎತ್ತುವುದಿಲ್ಲ ಎಂದು ಆರೋಪಿಸಿ ರಾಜ್ ಠಾಕ್ರೆ ಹೇಳಿಕೆ ನೀಡಿದ್ದು ಇದನ್ನು ಪವಾರ್ ತಳ್ಳಿಹಾಕಿದರು.












Click it and Unblock the Notifications