"ಕೇಂದ್ರ ಬಜೆಟ್ ದೇಶಕ್ಕೆ ಸಂಬಂಧಿಸಿದ್ದಾ, ಚುನಾವಣೆಗೆ ಸಂಬಂಧಿಸಿದ್ದಾ?"
ಕೋಲ್ಕತ್ತಾ, ಫೆಬ್ರವರಿ.02: ಕೇಂದ್ರ ಬಜೆಟ್ ಎನ್ನುವುದು ಇಡೀ ದೇಶಕ್ಕೆ ಸೇರಿದ್ದು ಆಗಿರಬೇಕೇ ವಿನಃ ಚುನಾವಣೆ ನಡೆಯುವ ರಾಜ್ಯಗಳಿಗೆ ಸೇರಿದ್ದು ಆಗಿರಬಾರದು ಎಂದು ಕೇಂದ್ರ ಸರ್ಕಾರದ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿ ಕಾರಿದ್ದಾರೆ.
ಪಶ್ಚಿಮ ಬಂಗಾಳ ಸೇರಿದಂತೆ ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಆಯವ್ಯಯದ ಮೇಲೆ ಇಡೀ ದೇಶದ ಪ್ರಜೆಗಳು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ದೇಶದ ಸಾಮಾನ್ಯ ವರ್ಗ ಮತ್ತು ಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸರ್ಕಾರವು ಬಜೆಟ್ ಮಂಡನೆ ಮಾಡಬೇಕು. ಆದರೆ ಕೇವಲ ಚುನಾವಣೆಗಳನ್ನು ಉದ್ದೇಶವಾಗಿಟ್ಟುಕೊಂಡು ಬಜೆಟ್ ಮಂಡಿಸಿದರೆ ಸಾಮಾನ್ಯ ಜನರ ನಿರೀಕ್ಷೆಗಳನ್ನು ತಲುಪುದಕ್ಕೆ ಹೇಗೆ ತಾನೇ ಸಾಧ್ಯವಾಗುತ್ತದೆ ಎಂದು ಉದ್ಧವ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ.

ಕೇಂದ್ರ ಬಜೆಟ್ ನಲ್ಲಿ ಚುನಾವಣಾ ರಾಜ್ಯಗಳಿಗೆ ಆದ್ಯತೆ:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2021-22ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಚುನಾವಣೆಗಳು ನಡೆಯಲಿರುವ ರಾಜ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು ಎಂಬ ಆರೋಪವಿದೆ. ಈ ಬಗ್ಗೆ ಉಲ್ಲೇಖಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಅಸ್ಸಾಂನಲ್ಲಿ ಚಹಾ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 1000 ಕೋಟಿ ರೂಪಾಯಿ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿಯೇ 25000 ಕೋಟಿ ರೂಪಾಯಿ ಘೋಷಿಸಿದ್ದನ್ನು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications