ಟಿಆರ್‌ಪಿ ಹಗರಣ; ಅರ್ನಬ್ ಬಂಧನಕ್ಕೆ ಮುನ್ನ ನೋಟಿಸ್ ನೀಡಲು ಸೂಚನೆ
ಮುಂಬೈ, ಮಾರ್ಚ್ 24: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿ.ವಿ ಸಂಪಾದಕ, ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸುವ ಪ್ರಸಂಗ ಎದುರಾದರೆ, ಬಂಧನಕ್ಕೆ ಮೂರು ದಿನದ ಮುನ್ನವೇ ನೋಟಿಸ್ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಬುಧವಾರ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.
ರಿಪಬ್ಲಿಕ್ ಟಿ.ವಿ, ರಿಪಬ್ಲಿಕ್ ಚಾನೆಲ್‌ಗಳ ನಿರ್ವಹಣೆ ಉಸ್ತುವಾರಿ ಹೊತ್ತ ಎಆರ್‌ಜಿ ಔಟ್ಲಿಯರ್ ಮೀಡಿಯಾ ಒಳಗೊಂಡಂತೆ ಇತರೆ ಟಿ.ವಿ ಚಾನೆಲ್‌ಗಳ ವಿರುದ್ಧದ ತನಿಖೆಯು 12 ವಾರಗಳಲ್ಲಿಯೇ ಪೂರ್ಣಗೊಳ್ಳಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಮನವಿಯನ್ನು ನ್ಯಾಯಾಧೀಶ ಎಸ್.ಎಸ್.ಶಿಂದೆ, ಮನೀಶ್ ಪಿಟಾಲೆ ಅವರನ್ನೊಳಗೊಂಡ ಪೀಠ ಸಮ್ಮತಿಸಿದೆ.
ನಕಲಿ ಟಿಆರ್‌ಪಿ ಪ್ರಕರಣ ಸಂಬಂಧ ಗೋಸ್ವಾಮಿ ಹಾಗೂ ಎಆರ್‌ಜಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಬುಧವಾರ ನಡೆಸಿದ್ದು, ಪೊಲೀಸರಿಗೆ ಸೂಚನೆ ನೀಡಿದೆ.

ತಮ್ಮ ವಿರುದ್ಧ ಯಾವುದೇ ಪುರಾವೆಗಳಿಲ್ಲದಿದ್ದರೂ ಮುಂಬೈ ಪೊಲೀಸ್ ಅಪರಾಧ ವಿಭಾಗವು ಚಾರ್ಜ್‌ಶೀಟ್‌ನಲ್ಲಿ ತಮ್ಮನ್ನು ಶಂಕಿತರೆಂದು ನಮೂದಿಸಿ ಸುಮ್ಮನೆ ತನಿಖೆ ನಡೆಸುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದರು.
ಸೋಮವಾರ ನಡೆದ ವಿಚಾರಣೆಯಲ್ಲಿಯೂ ಕೋರ್ಟ್ ಮುಂಬೈ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣದಲ್ಲಿ ಯಾರನ್ನೂ ಆರೋಪಿಗಳೆಂದು ಹೆಸರಿಸದೇ ತಿಂಗಳುಗಟ್ಟಲೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಪೊಲೀಸರಿಗೆ ಗೋಸ್ವಾಮಿ ವಿರುದ್ಧದ ದಾಖಲೆಗಳಲ್ಲಿ ಯಾವುದೇ ಗಣನೀಯ ಮಾಹಿತಿ ದೊರೆತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
2020ರ ಅಕ್ಟೋಬರ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಾವೀಗ 2021ರ ಮಾರ್ಚ್ ತಿಂಗಳಲ್ಲಿ ಇದ್ದೇವೆ. ಈ ವಿಚಾರದಲ್ಲಿ ಎಲ್ಲವನ್ನೂ ಕಲಸು ಮೇಲೋಗರ ಮಾಡಿರುವಂತಿರುವುದು ಕಾಣಿಸುತ್ತಿದೆ. ಅವರ ತಲೆಯ ಮೇಲೆ ಏಕೆ ಕತ್ತಿಯನ್ನು ನೇತುಹಾಕಿರಿಸಿದ್ದೀರಿ? ಕಳೆದ ಮೂರು ತಿಂಗಳಿನಿಂದ ತನಿಖೆ ನಡಸುತ್ತಿದ್ದೀರಿ ಮತ್ತು ಅವರ ವಿರುದ್ಧ ಯಾವ ಪುರಾವೆಯೂ ಸಿಕ್ಕಿಲ್ಲ. ಅವರ ಉದ್ಯೋಗಿಗಳ ವಿರುದ್ಧ ಈ ಹಿಂದೆ ತೆಗೆದುಕೊಂಡ ಕ್ರಮದಂತೆ ಯಾವಾಗ ಬೇಕಾದರೂ ಯಾವುದಾದರೂ ಕ್ರಮ ತೆಗೆದುಕೊಳ್ಳಬಹುದು ಎಂಬ ಭಯ ಅವರಲ್ಲಿದೆ' ಎಂದು ಕೋರ್ಟ್ ಹೇಳಿತ್ತು.












Click it and Unblock the Notifications