ಕವನ ಹಂಚಿದ ಬಿಗ್ ಬಿ ಅಮಿತಾಬ್ ಗೆ 'ಬಿಗ್' ಶಾಕ್
ಮುಂಬೈ, ಮೇ.28: ದಿವಂಗತ ಕಾರ್ಟೂನಿಸ್ಟ್ ಆರ್ ಕೆ ಲಕ್ಷ್ಮಣ್ ಅವರ ಬಗ್ಗೆ ವಿವಾದಿತ ಪೋಸ್ಟ್ ಹಾಕಿದ ನಂತರ ಬಾಲಿವುಡ್ ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಕವನ ಪೋಸ್ಟ್ ಮಾಡಿದ ತಪ್ಪಿಗೆ ಬಿಗ್ ಬಿ ಮೇಲೆ 1 ಕೋಟಿ ರು ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಅಮಿತಾಬ್ ಬಚ್ಚನ್ ಅವರು ಹಂಚಿದ ಕವನದ ನಿಜವಾದ ಲೇಖಕ ನಾನು ಎಂದು ಹೇಳಿಕೊಂಡಿರುವ ಡಾ. ಜಗ್ಬೀರ್ ರಾಥೀ ಈಗ ಬಿಗ್ ಬಿ ವಿರುದ್ಧ ತಿರುಗಿ ನಿಂತಿದ್ದಾರೆ. 2006ರಲ್ಲಿ ನಾನು ಬರೆದ ಕವನದ ಸಾಲುಗಳನ್ನು ಬಿಗ್ ಬಿ ಅವರು ಯಾರದೋ ಹೆಸರಿನಲ್ಲಿ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ವಿವರಣೆ ಕೋರಿ ಅಮಿತಾಬ್ ಬಚ್ಚನ್ ಅವರಿಗೆ ಇಮೇಲ್, ಫೋನ್ ಕಾಲ್ ಮಾಡಿ ಸಾಕಾಯಿತು. ಒಂದಕ್ಕೂ ಉತ್ತರ ಸಿಗದೇ ಇದ್ದ ಕಾರಣ ಕಾನೂನು ಪ್ರಕಾರ ನೋಟಿಸ್ ಕಳಿಸಲು ನಿರ್ಧರಿಸಲಾಗಿದೆ. 1ಕೋಟಿ ರು ಪರಿಹಾರ ಕೋರಿ ಲೀಗಲ್ ನೋಟಿಸ್ ಕಳಿಸಲಾಗಿದೆ ಎಂದು ಡಾ ಜಗ್ಬೀರ್ ಹೇಳಿದ್ದಾರೆ. ಅಮಿತಾಬ್ ಬಚ್ಚನ್ ಅವರಿಗೆ ಈ ಕಾನೂನು ನೋಟಿಸ್ ಗೆ ಉತ್ತರಿಸಲು 15 ದಿನಗಳ ಕಾಲ ಕಾಲಾವಕಾಶ ನೀಡಲಾಗಿದೆ.
ಲಭ್ಯ ಮಾಹಿತಿ ಪ್ರಕಾರ ವಿಕಾಸ್ ದುಬೇ ಎಂಬುವರು ಮೊದಲಿಗೆ ಕವನವನ್ನು ಬಿಗ್ ಬಿ ಅವರ ಖಾತೆ ಲಿಂಕ್ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿದ್ದರು. ಬಿಗ್ ಬಿ ಇದೇ ಕವನವನ್ನು ದುಬೇ ಅವರಿಗೆ ಕೃಪೆ ನೀಡಿ ಹಂಚಿದ್ದರು. ಎಲ್ಲೂ ಡಾ. ರತೀ ಹೆಸರು ಬಳಸಿರಲಿಲ್ಲ.
2015ರ ಜನವರಿ ತಿಂಗಳಲ್ಲಿ Roflindian 2.0 ಎಂಬ ಐಡಿಯಿಂದ ಬಂದ ಆರ್ ಕೆ ಲಕ್ಷ್ಮಣ್ ಕುರಿತ ಕಾರ್ಟೂನ್ ಚಿತ್ರವನ್ನು ಬಿಗ್ ಬಿ ಯಾವುದೇ ಕೃಪೆ ನೀಡದೆ ಹಂಚಿ ವಿವಾದಕ್ಕೀಡಾಗಿದ್ದರು.












Click it and Unblock the Notifications