Breaking News: ಮಹಾರಾಷ್ಟ್ರದ ಪೊಲೀಸ್ ಎನ್‌ಕೌಂಟರ್‌ನಲ್ಲಿ 26 ನಕ್ಸಲರ ಹತ್ಯೆ
ಮುಂಬೈ, ನವೆಂಬರ್ 13: ಮುಂಬೈನಿಂದ 900 ಕಿಲೋ ಮೀಟರ್ ದೂರದಲ್ಲಿರುವ ಪೂರ್ವ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ನಕ್ಸಲರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವ ಬಗ್ಗೆ ಪಿಟಿಐ ವರದಿ ಮಾಡಿದೆ. "ನಾವು ಇದುವರೆಗೆ 26 ನಕ್ಸಲರ ಮೃತದೇಹಗಳನ್ನು ಅರಣ್ಯದಿಂದ ವಶಪಡಿಸಿಕೊಂಡಿದ್ದೇವೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಹೇಳಿದ್ದಾರೆ.
"ಹೆಚ್ಚುವರಿ ಎಸ್ಪಿ ಸೌಮ್ಯಾ ಮುಂಡೆ ನೇತೃತ್ವದಲ್ಲಿ ಸಿ-60 ಪೊಲೀಸ್ ಕಮಾಂಡೋ ತಂಡವು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮರ್ಡಿಂತೋಲಾ ಅರಣ್ಯ ಪ್ರದೇಶದ ಕೊರ್ಚಿಯಲ್ಲಿ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ," ಎಂದು ಗೋಯಲ್ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಮಾವೋವಾದಿ ನಾಯಕ ಅಕ್ಕಿರಾಜು ಬಸ್ತಾರ್ ಅರಣ್ಯದಲ್ಲಿ ಸಾವು
ಪೊಲೀಸರು ನಡೆಸಿರುವ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ 26 ಮಂದಿ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೂಲಗಳ ಪ್ರಕಾರ ಅವರಲ್ಲಿ ಉನ್ನತ ಬಂಡಾಯ ನಾಯಕನೂ ಸೇನಿದ್ದಾನೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಹೆಲಿಕಾಪ್ಟರ್ ಮೂಲಕ ಗಾಯಗೊಂಡ ಸಿಬ್ಬಂದಿ ರವಾನೆ:
ಛತ್ತೀಸ್‌ಗಢದ ಗಡಿಯಲ್ಲಿ ಇರುವ ಗಡ್‌ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯು ನಡೆಸಿರುವ ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗೆ ಗಾಯಕೊಂಡ ಪೊಲೀಸ್ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ನಾಗ್ಪುರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.