ಮಹಾರಾಷ್ಟ್ರ ಪೊಲೀಸ್ ಮೇಲೆ ಕೊರೊನಾ ಅಟ್ಟಹಾಸ, 1000 ಸಿಬ್ಬಂದಿಗೆ ಸೋಂಕು
ಮುಂಬೈ, ಮೇ 14: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಕಾರ್ಯದಲ್ಲಿ ಇಡೀ ದೇಶದಲ್ಲಿ ಪೊಲೀಸ್ ಇಲಾಖೆ ತೊಡಗಿಕೊಂಡಿದೆ. ಅಯಾ ರಾಜ್ಯದ ಪೊಲೀಸ್ ಸಿಬ್ಬಂದಿ ಮನೆ ಮಠ ಬಿಟ್ಟು, ರಾತ್ರಿ-ಹಗಲು ಶ್ರಮಿಸುತ್ತಿದ್ದಾರೆ.
ಆದರೆ, ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎನ್ನುವುದು ಬೇಸರದ ಸಂಗತಿ. ಅದರಲ್ಲೂ ಮಹಾರಾಷ್ಟ್ರದಲ್ಲಿ 1000 ಜನ ಪೊಲೀಸರಿಗೆ ಕೊವಿಡ್ ಸೋಂಕು ತಗುಲಿದೆ.
ಮಹಾರಾಷ್ಟ್ರದಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 25 ಸಾವಿರ ಗಡಿ ದಾಟಿದೆ. ಅದರಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯವರೇ ಸಾವಿರ ಮಂದಿ ಇದ್ದಾರೆ. ಈ ಕುರಿತು ಮಹಾರಾಷ್ಟ್ರ ಪೊಲೀಸ್ ಇಲಾಖೆ ಅಂಕಿ-ಅಂಶಗಳನ್ನು ಪ್ರಕಟಿಸಿದೆ. ಮುಂದೆ ಓದಿ....

1001 ಪೊಲೀಸರಿಗೆ ಸೋಂಕು, 851 ಆಕ್ಟಿವ್
ಮಹಾರಾಷ್ಟ್ರದಲ್ಲಿ ಈವರೆಗೂ 1001 ಜನ ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ ಪ್ರಸ್ತುತ 851 ಕೇಸ್ ಸಕ್ರಿಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ 107 ಅಧಿಕಾರಿಗಳು ಹಾಗೂ 894 ಸಿಬ್ಬಂದಿ ಒಳಗೊಂಡಿದ್ದಾರೆ. 142 ಜನ ಪೊಲೀಸರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 8 ಜನ ಪೊಲೀಸರು ಮೃತಪಟ್ಟಿದ್ದಾರೆ.

218 ಪೊಲೀಸರ ಮೇಲೆ ಹಲ್ಲೆ
ಲಾಕ್‌ಡೌನ್ ವೇಳೆ ಹಲವು ಕಡೆ ಪೊಲೀಸರ ಮೇಲೆ ಹಲ್ಲೆ ಆಗಿದೆ. ಈವರೆಗೂ ಮಹಾರಾಷ್ಟ್ರದಲ್ಲಿ 218 ಜನ ಪೊಲೀಸರು ಹಲ್ಲೆಗೊಳಗಾಗಿದ್ದಾರೆ. 770 ಜನರನ್ನು ಪೊಲೀಸರ ಮೇಲೆ ಹಲ್ಲೆ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಬಹುತೇಕ ಎಲ್ಲರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಇಲ್ಲಿಯವರೆಗೂ ಐಪಿಸಿ 188 ಸೆಕ್ಸನ್ ಅಡಿಯಲ್ಲಿ 1,06,569 ಕೇಸ್ ದಾಖಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

4 ಕೋಟಿ ದಂಡ ಸಂಗ್ರಹ
ಲಾಕ್‌ಡೌನ್ ನಿಯಮಗಳ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಅನೇಕ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ನಂತರ ದಂಡ ವಸೂಲಿ ಮಾಡಿ ಬಿಡುಗಡೆಯೂ ಮಾಡಲಾಗಿದೆ. ಒಟ್ಟಾರೆ ಲಾಕ್‌ಡೌನ್ ಸಮಯದಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆ 4 ಕೋಟಿ (4,09,69,094) ದಂಡವನ್ನು ವಸೂಲಿ ಮಾಡಿದೆ.

ಇತರೆ ಪ್ರಕರಣಗಳು ವಿವರ
ಇನ್ನುಳಿದಂತೆ ಅಕ್ರಮ ಸಂಚಾರ ಮತ್ತು ಸಾಗಣಿಕೆ ಅಡಿ 1296 ಕೇಸ್‌ಗಳು ಬುಕ್ ಆಗಿದೆ. ಒಟ್ಟು 20,195 ಮಂದಿಯನ್ನು ಬಂಧನ ಮಾಡಲಾಗಿದೆ. 57,479 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈವರೆಗೂ 83 ಪೊಲೀಸ್ ಸಿಬ್ಬಂದಿ ಮತ್ತು 1 ಹೋಮ್ ಗಾರ್ಡ್ ಸಿಬ್ಬಂದಿ ಗಾಯಗೊಂಡಿದ್ದಾರೆ. 34 ಜನ ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆಯಾಗಿದೆ.












Click it and Unblock the Notifications