Manvi Elections : ಜೆಡಿಎಸ್‌ನಿಂದ ತನ್ನ ಭದ್ರಕೋಟೆಯನ್ನು ಮತ್ತೆ ವಶಪಡಿಸಿಕೊಳ್ಳುತ್ತಾ ಕಾಂಗ್ರೆಸ್? ಖಾತೆ ತೆಗೆಯುತ್ತಾ ಬಿಜೆಪಿ?
ಮಾನವಿ ಅಥವಾ ಮಾನ್ವಿ ರಾಯಚೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ರಾಯಚೂರಿನ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು, ಅದಲ್ಲದೇ ಎಸ್‌ಟಿ ಮೀಸಲು ಕ್ಷೇತ್ರ ಕೂಡ. ಮಾನ್ವಿ ಜಿಲ್ಲಾ ಕೇಂದ್ರ ರಾಯಚೂರಿನಿಂದ ಸುಮಾರು 50 ಕಿಮೀ ದೂರದಲ್ಲಿದೆ. ಶ್ರೀಹರಿ ಕಥಾಮೃತಸಾರ ರಚಿಸಿದ ಶ್ರೀ ಜಗನ್ನಾಥ ದಾಸ ಅವರ ಹುಟ್ಟೂರು ಮಾನ್ವಿ. ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಕೂಡ ಇದೇ ಮಾನ್ವಿ ಪ್ರದೇಶದವರು.
ಮಾನ್ವಿಯಲ್ಲಿರುವ ಪುರಾತನ ಕೋಟೆ ಪಟ್ಟಣದ ಪ್ರಮುಕ ಆಕರ್ಷಣೆಯಾಗಿದೆ. ತಾಲೂಕಿನಲ್ಲಿ ನಡೆಯುವ ಯಲ್ಲಮ್ಮ ದೇವಿ ಜಾತ್ರೆಗೆ ಸಾವಿರಾರು ಜನರು ಆಗಮಿಸುತ್ತಾರೆ. ಮಾನ್ವಿ ಬಯಲು ಸೀಮೆಗೆ ಸೇರಿದ್ದರೂ ತುಂಗಭದ್ರಾ ಎಡದಂಡೆ ಕಾಲುವೆಯ ಕಾರಣದಿಂದ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕೂಡ ಇದೆ. ಭತ್ತ ಮತ್ತು ಹತ್ತಿ ಇಲ್ಲಿನ ಪ್ರಮುಖ ಬೆಳೆಗಳು. ರಾಜ್ಯ ಹೆದ್ದಾರಿ 23 ಮಾನ್ವಿ ಮೂಲಕ ಹಾದು ಹೋಗುತ್ತದೆ. ಆದ್ದರಿಂದ, ಸಾರಿಗೆ ಸಂಚಾರದ ಸಮಸ್ಯೆ ಇಲ್ಲ. ಹೈದರಾಬಾದ್, ಹುಬ್ಬಳ್ಳಿ, ಮಂತ್ರಾಲಯಗಳಿಗೆ ನೇರ ಬಸ್ ಸೌಕರ್ಯವಿದೆ. ರಾಯಚೂರಿಗೆ ಹೋದರೆ ರೈಲ್ವೇ ಸೇವೆ ಲಭ್ಯವಾಗಲಿದೆ.

ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನದ್ದೇ ಪ್ರಾಬಲ್ಯ ಇದ್ದು, ಕಳೆದ ಬಾರಿ ಜೆಡಿಎಸ್ ಗೆಲುವು ಸಾಧಿಸಿದೆ. ಆದರೆ, ಬಿಜೆಪಿ ಇದುವರೆಗೂ ಒಂದು ಬಾರಿಯೂ ಮಾನ್ವಿಯಲ್ಲಿ ಖಾತೆ ತೆರೆದಿಲ್ಲ. ಈ ಬಾರಿಯೂ ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ಬಿಜೆಪಿ ಯಾವ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಕ್ಷೇತ್ರದ ರಾಜಕೀಯ ಹಿನ್ನೆಲೆ
ಇದುವರೆಗೂ 15 ಚುನಾವಣೆಗಳನ್ನು ಕಂಡಿರುವ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಕಾಂಗ್ರೆಸ್ ಗೆದ್ದುಕೊಂಡಿದೆ. 1999 ರಿಂದ 2013ರವರೆಗೆ ಸತತ ನಾಲ್ಕು ಬಾರಿ ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಮೊದಲ ಎರಡು ಅವಧಿ ಎನ್‌ಎಸ್ ಬೋಸರಾಜು ಗೆದ್ದರೆ, ಉಳಿದ ಎರಡು ಬಾರಿ ಹಂಪಯ್ಯ ನಾಯಕ್ ಗೆದ್ದಿದ್ದರು. ಆದರೆ, 2018ರಲ್ಲಿ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ್ ಗೆಲುವು ಸಾಧಿಸುವ ಮೂಲಕ ʼಕೈʼ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದರು.
2018 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್‌ನ ಆಂತರಿಕ ತಿಕ್ಕಾಟವೇ ಪ್ರಮುಖ ಕಾರಣ ಎಂಬುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಹಂಪಯ್ಯ ನಾಯಕ್‌ಗೆ ಟಿಕೆಟ್ ನೀಡಲಾಗಿತ್ತು. ಆದರೆ, ಡಾ ತನುಶ್ರೀ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದರಿಂದ ಕಾಂಗ್ರೆಸ್ ಗೆಲುವು ಕೈತಪ್ಪಿತು. ಈ ಸಲ ಆ ತಪ್ಪು ಪುನರಾವರ್ತನೆ ಆಗದಂತೆ ಕಾಂಗ್ರೆಸ್ ಎಚ್ಚರಿಕೆ ವಹಿಸಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ್ 53,548 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿದ್ದ ಡಾ ತನುಶ್ರೀ 37,733 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಬಿಜೆಪಿ ಅಭ್ಯರ್ಥಿ ಶರಣಪ್ಪ ಕೆ ಗುಡದಿನ್ನಿ 30250 ಮತ ಪಡೆದರೆ, ಹಾಲಿ ಶಾಸಕರಾಗಿದ್ದ ಕಾಂಗ್ರೆಸ್‌ನ ಹಂಪಯ್ಯ ನಾಯಕ್ 28,177 ಮತ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
| ವರ್ಷ | ವಿಜೇತರು | ಮತಗಳು | ಸೋತವರು |
| 2018 | ರಾಜಾ ವೆಂಕಟಪ್ಪ ನಾಯಕ ಜೆಡಿ(ಎಸ್) | 53,548 | ತನುಶ್ರೀ ( ಪಕ್ಷೇತರ ) 37,733 |
| 2013 | ಜಿ.ಹಂಪಯ್ಯ ಸಾಹುಕಾತರ್ ಬಲ್ಲಟಗಿ (ಕಾಂಗ್ರೆಸ್) | 50,619 | ರಾಯಾ ವೆಂಕಟಪ್ಪ ನಾಯಕ್( ಜೆಡಿಎಸ್) 43,632 |
| 2008 | ಜಿ.ಹಂಪಯ್ಯ ಸಾಹುಕಾತರ್ ಬಲ್ಲಟಗಿ (ಕಾಂಗ್ರೆಸ್) | 38,290 | ಗಂಗಾಧರ್ ನಾಯಕ್ 35,771 |
ಆಕಾಂಕ್ಷಿಗಳು ಯಾರಾರು?
ಜೆಡಿಎಸ್‌ನಿಂದ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಹಂಪಯ್ಯ ನಾಯಕ್ ಮತ್ತೊಮ್ಮೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಅದಲ್ಲದೇ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಬಿವಿ ನಾಯಕ್, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರಣಪ್ಪ ಕೆ ಗುಡದಿನ್ನಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತನುಶ್ರೀ ಅವರು ಕೂಡ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಎಐಸಿಸಿ ಕಾರ್ಯದರ್ಶಿ ಎನ್‌ಎಸ್ ಬೋಸರಾಜು ಅವರ ನಿರ್ಧಾರದ ಮೇಲೆ ಕ್ಷೇತ್ರದ ಟಿಕೆಟ್ ತೀರ್ಮಾನ ಆಗಲಿದೆ ಎನ್ನಲಾಗುತ್ತಿದೆ.

ಬಿಜೆಪಿಯಿಂದ ಮಾಜಿ ಶಾಸಕ ಗಂಗಾಧರ ನಾಯಕ ಹಾಗೂ ಮುಖಂಡ ಬಿ.ಮಾನಪ್ಪ ನಾಯಕ ಟಿಕೆಟ್ ನಿರೀಕ್ಷೆಯಲ್ಲಿದ್ದು, ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕರ ಅಣತಿಯಂತೆ ಅಭ್ಯರ್ಥಿ ಘೋಷಣೆಯಾಗುವುದರಲ್ಲಿ ಅನುಮಾನವಿಲ್ಲ.












Click it and Unblock the Notifications