ಕಟೀಲಿನಲ್ಲಿ ವಿಚಿತ್ರ ವೇಷ ಧರಿಸಿ 3ರ ಬಾಲಕಿಗೆ ನೆರವಾದ ಯುವಕರು
ಮಂಗಳೂರು, ಫೆಬ್ರವರಿ 09: ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗಾಗಿ ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭ ಯುವಕರ ತಂಡವೊಂದು ವಿಶೇಷ ವೇಷ ಧರಿಸಿ ಸುಮಾರು ಮೂರು ಲಕ್ಷ ಹಣ ಸಂಗ್ರಹಿಸಿ ಆ ಮಗುವಿನ ಪೋಷಕರಿಗೆ ನೀಡಿದ್ದಾರೆ.
ನಿಹಾರಿಕ ಎಂಬ 5 ವರ್ಷದ ಬಾಲಕಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಆಕೆಯನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ 10 ಲಕ್ಷ ತಗುಲಲಿದ್ದು, ನಿಹಾರಿಕಾಳ ತಂದೆ ತಾಯಿ ಬಡವರಾದ್ದರಿಂದ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಮೂಡಬಿದಿರೆಯ ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಯುವಕರು ಸಹಾಯಕ್ಕೆ ಮುಂದಾದರು.

ತಂಡದ ವಿಕ್ಕಿ ಶೆಟ್ಟಿ ಬೆದ್ರ ಎಂಬುವರಿಗೆ ವಿಶೇಷ ವೇಷ ಧರಿಸಿ ಕಟೀಲು ಬ್ರಹ್ಮಕಲಶೋತ್ಸವದ ದಿನ ಭಕ್ತರಿಂದ ದೇಣಿಗೆ ಸಂಗ್ರಹಿಸಿದ್ದರು. ವಿಕ್ಕಿ ಶೆಟ್ಟಿ ಈ ಹಿಂದೆಯೂ ವಿವಿಧ ವೇಷಗಳನ್ನು ಧರಿಸಿ ಹಲವು ಮಂದಿಗೆ ನೆರವಾಗಿದ್ದವರು. ಒಂದು ಒಳ್ಳೆಯ ಉದ್ದೇಶವನ್ನು ಮನಗಂಡ ಜನರೂ ಹಣ ಸಹಾಯ ಮಾಡಿದ್ದರು. ಒಂದೇ ದಿನದಲ್ಲಿ 3 ಲಕ್ಷದ 136 ರೂಪಾಯಿ ಸಂಗ್ರಹವಾಗಿತ್ತು. ಕ್ಷೇತ್ರದಲ್ಲಿ ಸಂಗ್ರಹವಾದ ಒಟ್ಟು ಹಣವನ್ನು ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಟೀಲು ದೇಗುಲದ ಪ್ರಧಾನ ಅರ್ಚಕರಾದ ಹರಿನಾರಾಯಣ ಅಸ್ರಣ್ಣರವರು ನಿಹಾರಿಕಾಳ ಪೋಷಕರಿಗೆ ಹಸ್ತಾಂತರಿಸಿದರು.












Click it and Unblock the Notifications