ಮಂಗಳೂರು : ಪತಿಯಿಂದಲೇ ಪತ್ನಿ ಕತ್ತುಕೊಯ್ದು ಕೊಲೆ
ಮಂಗಳೂರು, ಜು. 30 : ಮಂಗಳೂರು ನಗರದ ಕಾವೂರು ಬಳಿಯ ಪಂಜಿಮೊಗೆರು ಎಂಬಲ್ಲಿ ಪತಿಯೇ ಪತ್ನಿಯನ್ನು ಕೊಲೆಮಾಡಿ ಪರಾರಿಯಾಗಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪತಿಯಿಂದಲೇ ಕೊಲೆಯಾದ ಮಹಿಳೆಯನ್ನು ಅನ್ನಪೂರ್ಣ (32) ಎಂದು ಗುರುತಿಸಲಾಗಿದೆ. ಬುಧವಾರ ಮುಂಜಾನೆ ಚಾಕುವಿನಿಂದ ಅನ್ನಪೂರ್ಣ ಕತ್ತು ಕೊಯ್ದು ಪತಿ ಪಕೀರಯ್ಯ (40) ಕೊಲೆ ಮಾಡಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ದಂಪತಿಗಳು ಕೊಪ್ಪಳ ಮೂಲದವರೆಂದು ತಿಳಿದುಬಂದಿದೆ.

ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಪಕೀರಯ್ಯ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮನೆಯಲ್ಲಿ ಗಂಡ-ಹೆಂಡಂತಿ ಮಾತ್ರ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಒಂದು ತಿಂಗಳ ಹಿಂದೆ ಆಗಮಿಸಿದ್ದರು : ಕೊಪ್ಪಳ ಮೂಲದವರಾದ ಅನ್ನಪೂರ್ಣ ಮತ್ತು ಪಕೀರಯ್ಯ ಒಂದು ತಿಂಗಳ ಹಿಂದೆ ಮಂಗಳೂರಿಗೆ ಕೂಲಿ ಕೆಲಸಕ್ಕಾಗಿ ಆಗಮಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಕೊಪ್ಪಳದಲ್ಲಿರುವ ಪಕೀರಯ್ಯ ತಂದೆ-ತಾಯಿ ಅವರನ್ನು ನೋಡಿಕೊಳ್ಳುತ್ತಿದ್ದಾರೆ.

ದಂಪತಿ ನಡುವೆ ಅಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿಯೂ ಇಬ್ಬರ ನಡುವೆ ಜಗಳ ನಡೆದಿದ್ದು, ಪತಿ ಅನ್ನಪೂರ್ಣ ಅವರನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications