'ಅನುಮತಿ ಇಲ್ಲದೇ ಪ್ರತಿಭಟಿಸಿದ್ದಕ್ಕೆ ಲಾಠಿಚಾರ್ಜ್' - ಪೊಲೀಸ್ ಆಯುಕ್ತರ ಸ್ಪಷ್ಟನೆ
ಮಂಗಳೂರು, ಎಪ್ರಿಲ್ 4: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಮೇಲಿನ ಲಾಠಿ ಚಾರ್ಚ್ ಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಎಂ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣದ ಕುರಿತು ಒನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್, ' ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದರು. ಹೀಗಾಗಿ ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಬೇಕಾಯಿತು' ಎಂದು ಹೇಳಿದ್ದಾರೆ.[ಮಂಗಳೂರು: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್, 100 ಜನ ವಶಕ್ಕೆ]

ಮಂಗಳವಾರ ಬೆಳಗ್ಗೆ ಪಿಎಫ್ಐ ಕಾರ್ಯಕರ್ತರು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ದಿಢೀರನೇ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಮಂಗಳೂರು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಇದರಿಂದ ಹಲವರು ಗಾಯಗೊಂಡಿದ್ದರು.

ಇನ್ನು "ಬಂಧಿತ ಖೈದಿ ಅಹ್ಮದ್ ಖುರೇಶಿ ಸ್ವತಃ ಅವರೇ ಬಿದ್ದು ಗಾಯಗೊಂಡಿದ್ದಾರೆ. ಅವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ," ಎಂದು ಹೇಳಿರುವ ಅವರು ಪಿಎಫ್ಐ ಸಂಘಟನೆ ವಾದವನ್ನು ತಳ್ಳಿ ಹಾಕಿದ್ದಾರೆ. ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ನೀಡುತ್ತಿರುವ ಚಿಕಿತ್ಸೆ ಮತ್ತು ಕೋರ್ಟ್ ಆದೇಶದ ಪ್ರತಿಗಳನ್ನು ಬಿಡುಗಡೆ ಮಾಡಿದ್ದಾರೆ.

ಪೊಲೀಸ್ ಆಯುಕ್ತರ ಜತೆ 'ಎನ್ಐಎ' ಮಾತುಕತೆ
ಮಂಗಳೂರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ತಂಡವೊಂದು ಆಗಮಿಸಿದ್ದು, ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಹಾಗೂ ಇಲ್ಲಿನ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡಿದೆ.
"ನಮ್ಮ ಪ್ರದೇಶದಲ್ಲಿ ಕೋಮು ಆಧಾರದಲ್ಲಿ ಕಾರ್ಯಚಟುವಟಿಕೆ ನಡೆಯುತ್ತವೆ. ಅವುಗಳ ಬಗ್ಗೆ ಪರಸ್ಪರರ ಬಳಿ ಇರುವ ಮಾಹಿತಿಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಎನ್ಐಎ ಭೇಟಿ ನೀಡಿದೆ. ಹಲವು ಸಂಘಟನೆಗಳ ಕುರಿತು ಚರ್ಚಿಸಿದ್ದೇವೆ. ಹೀಗೆ ಎಲ್ಲ ಸಂಸ್ಥೆಗಳ ಜೊತೆಗೆ ನಾವು ಪರಸ್ಪರ ಚರ್ಚೆ ನಡೆಸುತ್ತಿರುತ್ತೇವೆ. ವಿಶೇಷವಾಗಿ ಕೋಮು ಘಟನೆಗಳು, ಭಯೋತ್ಪಾದಕ ಚಟುವಟಿಕೆಗಳ ಕುರಿತು ನಾವು ವಿಶೇಷ ಕಾಳಜಿ ವಹಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇವೆ. ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ," ಎಂದು ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.

ಪ್ರಕಾಶ್ ಪೂಜಾರಿ ಹತ್ಯೆ ಪ್ರಕರಣಕ್ಕೂ ಎನ್ಐಎ ಭೇಟಿಗೂ ಸಂಬಂಧವಿಲ್ಲ ಫೆಬ್ರವರಿಯಲ್ಲಿ ನಡೆದ ಪ್ರಕಾಶ್ ಪೂಜಾರಿ ಹತ್ಯೆ ಯತ್ನ ಪ್ರಕರಣದಲ್ಲಿ ಐದು ಮಂದಿಯನ್ನು ಬಂಧಿಸಿದ್ದೇವೆ. ಇದರಲ್ಲಿ ಖಾದರ್ ಕುಳಾಯಿ ಮೇಲೆ ಸಂಶಯ ಇದೆ. ಖಾದಾರ್ ನ್ನು ವಿಚಾರಣೆಗೆ ಒಳಪಡಿಸಬೇಕಿದೆ. ವಿಚಾರಣೆ ಬಳಿಕ ಅವರನ್ನು ಪ್ರಕರಣದಲಿ ವಶಕ್ಕೆ ತೆಗೆದುಕೊಳ್ಳಬೇಕೆ, ಬೇಡವೇ ಎಂಬುದನ್ನು ನಿರ್ಧರಿಸುತ್ತೇವೆ. ಎನ್ಐಎ ಭೇಟಿ ಮತ್ತು ಇದು ಎರಡು ಪ್ರತ್ಯೇಕ ವಿಷಯಗಳು ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದರು.












Click it and Unblock the Notifications