ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತ
ಮಂಗಳೂರು, ಆಗಸ್ಟ್ 14: ಭಾರೀ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಣಾಮ 300ಕ್ಕೂ ಹೆಚ್ಚು ಬಸ್ಸು, ಲಾರಿ, ಕಾರುಗಳು ಘಾಟಿಯಲ್ಲಿ ಸಿಲುಕಿವೆ.
ಶಿರಾಡಿ ಘಾಟಿಯ ಮಾರನಹಳ್ಳಿ ಸಮೀಪದ ದೊಡ್ಡ ತೊಪ್ಪೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ನಿನ್ನೆ ಸೋಮವಾರ ಸಂಜೆಯಿಂದಲೇ ಹಲವು ಬಾರಿ ಕುಸಿತವುಂಟಾಗಿದೆ. ಅದನ್ನು ರಾತ್ರಿ ವೇಳೆಯೇ ತೆರವುಗೊಳಿಸಲಾಗಿತ್ತಾದರೂ ಇಂದು ಬೆಳಗ್ಗೆ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ 300 ಕ್ಕೂ ಹೆಚ್ಚು ವಾಹನಗಳು ಶಿರಾಡಿ ಘಾಟಿಯಲ್ಲಿ ಸಿಕ್ಕಿಹಾಕಿ ಕೊಂಡಿವೆ.

ಶಿರಾಡಿ ಘಾಟಿಯ ಗುಂಡ್ಯ ಗಡಿ ದೇವಳದ ಸಮೀಪದಿಂದ ಮೇಲ್ಗಡೆ ಸುಮಾರು ಮೂರು ಕಡೆಗಳಲ್ಲಿ ಗುಡ್ಡ ಕುಸಿತ ಕಂಡುಬಂದಿದ್ದು, ರಸ್ತೆಗೆ ಬಂದು ಬಿದ್ದಿರುವ ಮಣ್ಣು ಮತ್ತು ಮರಗಳನ್ನು ತೆರವು ಗೊಳಿಸಲು ಓಷಿಯನ್ ಕನ್ಸ್ಟ್ರಕ್ಷನ್ ನ ಸಿಬ್ಬಂದಿಗಳು ದೌಡಾಯಿಸಿದ್ದಾರೆ.
ಇವುಗಳನ್ನು ತೆರವುಗೊಳಿಸುತ್ತಿದ್ದ ವೇಳೆಯಲ್ಲೇ ಮತ್ತೆ ಎರಡು ಕಡೆ ಗುಡ್ಡ ಕುಸಿತ ಉಂಟಾಗಿದೆ ಎಂದು ಹೇಳಲಾಗಿದೆ.

ಒಟ್ಟು ಅಂದಾಜು ಐದು ಕಡೆಗಳಲ್ಲಿ ಕೆಂಪು ಹಳ್ಳದಿಂದ ಕೆಳಗಡೆ ಗುಡ್ಡ ಜರಿತವುಂಟಾಗಿದ್ದು, ಸಮರೋಪಾದಿಯಲ್ಲಿ ಇವುಗಳನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ದಾರಿ ಮಧ್ಯೆ ಸಿಲುಕಿಕೊಂಡಿರುವ ವಾಹನಗಳ ಪ್ರಯಾಣಿಕರಿಗೆ ಮೊಬೈಲ್ ನೆಟ್ ವರ್ಕ್ ಕೂಡ ಸಿಗದ ಕಾರಣ ಪರದಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ತುರ್ತು ಅವಶ್ಯಕತೆಗಳ ಪೂರೈಕೆಗೆ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.












Click it and Unblock the Notifications