ಗೋವಾದಲ್ಲಿ ಶ್ರೀರಾಮಸೇನೆ ಬ್ಯಾನ್ ಮಾಡಿದಾಗ ರಾಮಭಕ್ತರು ಎಲ್ಲಿದ್ದರು?: ಬಿಜೆಪಿ ವಿರುದ್ಧ ವೀರಪ್ಪ ಮೊಯ್ಲಿ ಆಕ್ರೋಶ
ಮಂಗಳೂರು, ಮೇ, 05: ರಾಜ್ಯ ವಿಧಾನಸಭೆ ಚುನವಣೆ ಹಿನ್ನೆಲೆ ಈಗಾಗಲೇ ರಾಜ್ಯದಲ್ಲಿ ಮೂರು ಪಕ್ಷಗಳಿಂದಲೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳಿರುವ ವಿಚಾರ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಬಿಜೆಪಿ ನಾಯಕರು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಕೂಡ ಕೌಂಟರ್ ಕೊಡುತ್ತಲೇ ಇದ್ದಾರೆ. ಇದೀಗ ಬಿಜೆಪಿಯವರ ವಿರುದ್ಧ ಮಂಗಳೂರಿನಲ್ಲಿ ಮಾಜಿ ಸಿಎಂ ವೀರಪ್ಪ ಮೊಯಿಲಿ ಹರಿಹಾಯ್ದಿದ್ದಾರೆ.
ಯಾವುದೇ ಸಂಸ್ಥೆ ಯಾವ ವ್ಯಕ್ತಿಯೊಬ್ಬ ಭಯದ ವಾತಾವರಣ ಸೃಷ್ಟಿಸುತ್ತಿದ್ದರೆ, ವಿದ್ವೇಷಕ ಕೃತ್ಯವನ್ನು ಪ್ರಚುರ ಪಡಿಸುತ್ತಿದ್ದರೆ ಅದು ಸಂವಿಧಾನ ವಿರೋಧವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂಥವರ ವಿರುದ್ಧ ಸುಮೋಟೊ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ. ಆದ್ದರಿಂದ ಈ ವಿಚಾರದಲ್ಲಿ ಕಾನೂನು ಪ್ರಕಾರ ನಡೆದರೆ ಬಿಜೆಪಿಯವರಿಗೆ ಸಮಸ್ಯೆಯೇನು ಎಂದು ಪ್ರಶ್ನಿಸಿದರು.

ಹಿಂದೆ ಗೋವಾದಲ್ಲಿ ಮನೋಹರ್ ಪರಿಕ್ಕರ್ ಸರ್ಕಾರ ಶ್ರೀರಾಮ ಸೇನೆಯನ್ನು ಬ್ಯಾನ್ ಮಾಡಿತ್ತು. ಹಾಗದರೇ ಇದು ರಾಮನ ವಿರೋಧವಲ್ಲವೇ ಎಂದು ವೀರಪ್ಪ ಮೊಯ್ಲಿ ಪ್ರಶ್ನಿಸಿದರು. ಬಿಜೆಪಿಯವರು ದೇಶದಲ್ಲಿ ಅತೀ ದೊಡ್ಡ ಪ್ರತಿಮೆ ಸ್ಥಾಪಿಸಿದ ವಲ್ಲಭಭಾಯ್ ಪಟೇಲ್ ಅವರೇ ಹಿಂದೆ ಆರ್‌ಎಸ್ಎಸ್ ಅನ್ನು ಬ್ಯಾನ್ ಮಾಡಿದ್ದರು. ಆದರೆ ಜವಾಹರಲಾಲ್ ನೆಹರೂ ಅವರು ಈ ಬ್ಯಾನ್ ಅನ್ನು ಹಿಂಪಡೆದಿದ್ದರು ಎಂದು ಹೇಳಿದರು.
ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೇ ಇದ್ದಾರೆ. ರಾಜ್ಯದ ಚುನಾವಣೆಗೆಂದು ದೇಶದ ಪ್ರಧಾನಿಯವರು ಇಷ್ಟೊಂದು ಸಮಯ ಕಳೆದಿದ್ದು ಇತಿಹಾಸದಲ್ಲಿಯೇ ಇಲ್ಲ. ತಾವು ಗೆಲ್ಲುತ್ತೇವೆ ಎಂದು ನಂಬಿಕೆಯಿದ್ದರೆ ಅವರು ಇಷ್ಟೊಂದು ಸಮಯ ಇಲ್ಲಿ ಇರಬೇಕೆಂದಿಲ್ಲ. ಇದಕ್ಕೆ ಅವರಿಗಿರುವ ಸೋಲುವ ಭೀತಿಯೇ ಕಾರಣ ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿದರು.
ಈ ಬಾರಿ ರಾಜ್ಯದಲ್ಲಿ, ರಾಜ್ಯಾಡಳಿದಲ್ಲಿ ಬದಲಾವಣೆ ಆಗಬೇಕಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಈಗಿನ ಬಿಜೆಪಿ ಸರಕಾರ ಆಗಿದೆ. ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಿರುವ ಯಡಿಯೂರಪ್ಪನವರನ್ನೇ ಮುಂದಿಟ್ಟುಕೊಂಡು ಅಮಿತ್ ಶಾ ಹಾಗೂ ಮೋದಿಯವರು ಚುನಾವಣೆ ಎದುರಿಸಲು ಹೊರಟಿದ್ದಾರೆ. ಆದ್ದರಿಂದ ರೋಮ್ ನಗರಕ್ಕೆ ಬಂದ ಅಂದಿನ ಪರಿಸ್ಥಿತಿ ಇಂದು ಭಾರತಕ್ಕೆ ಬಂದಿದ್ದು ಅತ್ಯಂತ ದುರದೃಷ್ಟಕರ ಎಂದು ಹೇಳಿದರು.
ಇನ್ನು ಕಾಂಗ್ರೆಸ್‌ಗೆ ಮತ ನೀಡಿದಲ್ಲಿ ದೊಂಬಿ ಏಳುತ್ತದೆ ಎಂಬ ಅಮಿತ್ ಶಾ ಹೇಳಿಕೆ ನೋಡಿದರೆ ಅವರು ಎಂತಹ ಜವಾಬ್ದಾರಿಯುತ ರಾಜಕಾರಣಿ, ಆಡಳಿತಗಾರ ಎಂದು ತಿಳಿದುಬರುತ್ತದೆ. ಇದು ಸಂವಿಧಾನ ವಿರೋಧಿ ಹೇಳಿಕೆ ಆಗಿದೆ. ಹಾಗೆಯೇ ಗುಜರಾತ್‌ನಿಂದ ಗಡಿಪಾರು ಆಗಿರುವ ಅಮಿತ್ ಶಾರಿಂದ ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಬಳಿಕ ಬಿಜೆಪಿ ಸರ್ಕಾರ ಬಂದು ಅವರಿಗೆ ಅವರೇ ಕ್ಷಮೆಕೇಳಿ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಒಟ್ಟಿನಲ್ಲಿ ಕಾಂಗ್ರೆಸ್ ಯಾವಾಗ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧವನ್ನು ಪ್ರಸ್ತುತಪಡಿಸಿತೋ ಅಲ್ಲಿಂದ ರಾಜ್ಯದಲ್ಲಿ ವಾಕ್ಸಮರದ ಬೆಂಕಿಯೇ ಹೊತ್ತಿ ಉರಿಯುತ್ತಿದೆ. ಬಿಜೆಪಿ ನಾಯಕರು ಇದೇ ವಿಚಾರವನ್ನು ಇಟ್ಟುಕೊಂಡು ಮೇಲಿಂದ ಮೇಲೆ ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಳ್ಳುತ್ತಿದ್ದು, ಇದಕ್ಕೆ ನಾವೇನು ಕಡಿಮೆಯಿಲ್ಲ ಅಂತೇಳಿ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಗೆ ಕೌಂಟರ್ ಕೊಡುತ್ತಿದ್ದಾರೆ. ಈ ವಾಕ್ಸಮರದ ಬೆಂಕಿ ಚುನಾವಣೆ ಆದ ಮೇಲೆ ಏನಾದರೂ ನಿಲ್ಲುತ್ತದೆಯಾ ಎಂದು ಕಾದುನೋಡಬೇಕಿದೆ ಅಷ್ಟೇ.












Click it and Unblock the Notifications