ನಿಯಮಗಳನ್ನು ಪಾಲಿಸದ ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್ 21: ಇಲ್ಲಿನ ಹೊರವಲಯದಲ್ಲಿರುವ ಸುರತ್ಕಲ್ ನ ಟೋಲ್ ಗೇಟ್ ಮುಚ್ಚಲು ಹಾಗೂ ಹೆದ್ದಾರಿ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಎನ್ ಐಟಿಕೆ ಟೋಲ್ ಗೇಟ್ ಬಳಿ ಇಂದು ಪ್ರತಿಭಟನೆ ನಡೆಸಿದರು.
ಈ ಹೋರಾಟದ ನೇತೃತ್ವಹಿಸಿ ಮಾತನಾಡಿದ ಮುನೀರ್ ಕಾಟಿಪಳ್ಳ, ಸುರತ್ಕಲ್ ನ ಟೋಲ್ ಗೇಟ್ ರಾಷ್ಟ್ರೀಯ ಹೆದ್ದಾರಿಯ ನೀತಿ-ನಿಯಮಗಳನ್ನು ಪಾಲಿಸದೇ ಶುಲ್ಕ ವಸೂಲು ಮಾಡುತ್ತಿದ್ದು, ಇದನ್ನು ಬಂದ್ ಮಾಡಬೇಕೆಂದು ಆಗ್ರಹಿಸಿದರು.

"ಹೆದ್ದಾರಿಯನ್ನು ಸಂಪೂರ್ಣ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಹೆದ್ದಾರಿಯೆಂಬುದು ವರ್ಷದ 365 ದಿನವು ಸುಸ್ಥಿತಿಯಲ್ಲಿಡಬೇಕು. ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಮಾಡುವ ನಂತರ ಹೆದ್ದಾರಿಯ ಜೊತೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು.
24 ಗಂಟೆ ರಸ್ತೆ ನಿರ್ವಹಣೆ ಮಾಡಬೇಕು, ಹೆದ್ದಾರಿಯುದ್ದಕ್ಕೂ ದಾರಿ ದೀಪ, ಅಲ್ಲಲ್ಲಿ ಕುಡಿಯುವ ನೀರು, ವಿಶ್ರಾಂತಿ ಜಾಗ ಇರಬೇಕು ಎಂಬ ನಿಯಮವಿದ್ದರೂ ಅದನ್ನು ಪೂರೈಸದೆ ಟೋಲ್ ಗೇಟ್ ನಲ್ಲಿ ಶುಲ್ಕ ವಸೂಲು ನಡೆಯುತ್ತಿದೆ. ಈ ಅಕ್ರಮ ಸುಲಿಗೆ ಮಾಡುತ್ತಿರುವ ಟೋಲ್ ಕೇಂದ್ರವನ್ನು ಬಂದ್ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆ ಯಲ್ಲಿ ಡಿವೈಎಫ್ಐ ಮುಖಂಡರುಗಳಾದ ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ದಯಾನಂದ ಶೆಟ್ಟಿ ಮೊದಲಾದವರು ಭಾಗಿಯಾಗಿದ್ದರು












Click it and Unblock the Notifications