ಹಿಜಾಬ್ ವಿರುದ್ಧ ಅಲ್ಲ, ವಿವಾದದಿಂದ ದುರ್ಲಾಭ ಪಡೆಯುವವರ ಬಗ್ಗೆ ಹೇಳಿದ್ದು ಎಂದ ಯು ಟಿ ಖಾದರ್
ಮಂಗಳೂರು, ಜೂ7: ಕರಾವಳಿಯಲ್ಲಿ ಮತ್ತೆ ಹಿಜಾಬ್ ಕಿಚ್ಚು ಜೋರಾಗಿದೆ. ಕೋರ್ಟ್ ಆದೇಶದ ಬಳಿಕವೂ ಧರಿಸಿ ಕಾಲೇಜಿಗೆ ವಿದ್ಯಾರ್ಥಿನಿಯರಿಗೆ, ಕಾಲೇಜು ನೋಟಿಸ್ ಕಳುಹಿಸಿದೆ. ಮತ್ತೊಂದೆಡೆ ಹಿಜಾಬ್ ವಿದ್ಯಾರ್ಥಿನಿಯರ ವಿರುದ್ಧವಾಗಿ ಟೀಕಾ ಪ್ರಹಾರ ನಡೆಸಿದ ಯು.ಟಿ ಖಾದರ್ ಈಗ ತಮ್ಮ ಹೇಳಿಕೆಯ ಬಗ್ಗೆ ಉಲ್ಟಾ ಹೊಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಜಾಬ್ ಜ್ವಾಲೆ ಹಬ್ಬಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸರಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ಗಾಗಿ ಪಟ್ಟುಹಿಡಿದ 24 ವಿದ್ಯಾರ್ಥಿನಿಯರಿಗೆ ಕಾಲೇಜು ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಕೋರ್ಟ್ ಆದೇಶದ ಬಳಿಕವೂ ತರಗತಿಗಳಲ್ಲಿ ಹಿಜಬ್ ಬೇಕು ಅಂತಾ ಪ್ರತಿಭಟನೆಗೆ ಮುಂದಾದ ಇಪ್ಪತ್ತನಾಲ್ಕು ವಿದ್ಯಾರ್ಥಿನಿಯರಿಗೆ ಕಾಲೇಜು ಒಂದು ವಾರಗಳ ಕಾಲ ನಿರ್ಬಂಧ ವಿಧಿಸಿದೆ. ವಿದ್ಯಾರ್ಥಿನಿಯರು ಪಾಠ ಮುಖ್ಯವೋ ಅಥವಾ ಧಾರ್ಮಿಕತೆ ಮುಖ್ಯವೋ ಎಂಬುದನ್ನು ಸ್ಪಷ್ಟಪಡಿಸಬೇಕು .ಧಾರ್ಮಿಕತೆ ಮುಖ್ಯವಾದಲ್ಲಿ ಕಾಲೇಜಿನಿಂದ ಹೊರ ನಡೆಯಬೇಕು.. ಕಾಲೇಜಿನಲ್ಲಿ ಧಾರ್ಮಿಕತೆಗೆ ಅವಕಾಶ ಇಲ್ಲ, ಅವಕಾಶ ಇರುವಲ್ಲಿ ಶಿಕ್ಷಣ ಪಡೆಯಲಿ ಅಂತ ಉಪ್ಪಿನಂಗಡಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸ್ಪಷ್ಟವಾಗಿ ಹೇಳಿದೆ.

ಕೆಲವರಿಂದ ದುರ್ಲಾಭಕ್ಕೆ ಯತ್ನ: ಖಾದರ್
ನಿನ್ನೆ ಸುದ್ದಿಗೋಷ್ಠಿಯಲ್ಲಿ ಹಿಜಾಬ್ ವಿದ್ಯಾರ್ಥಿನಿಯರಿಗೆ ಬುದ್ಧಿ ಮಾತು ಹೇಳಿದ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಉಲ್ಟಾ ಹೊಡೆದಿದ್ದಾರೆ. ಸುದ್ದಿಗೋಷ್ಠಿ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ, ಕೆಲವರು ಇದರ ದುರ್ಲಾಭ ಪಡೆಯಲು ಪ್ರಯತ್ನಿಸಿದ್ದಾರೆ. ನಾನು ಹಿಜಬ್ ಧರಿಸುವ ಹೆಣ್ಣು ಮಕ್ಕಳಿಗೆ ಯಾವುದೇ ಮಾತು ಹೇಳಿಲ್ಲ ,ನನ್ನ ಮಗಳೂ ಹಿಜಾಬ್ ಧರಿಸುತ್ತಾಳೆ. ಆದರೆ ಹಿಜಾಬ್ ಹೆಸರಿನಲ್ಲಿ ಸಮಸ್ಯೆ ಸೃಷ್ಟಿಸುವವರ ಕುರಿತು ನಾನು ಮಾತನಾಡಿದ್ದೇನೆ ಅಂತ ಯು.ಟಿ.ಖಾದರ್ ಸ್ಪಷ್ಟ ಪಡಿಸಿದ್ದಾರೆ.
ಕೆಲ ಸ್ಥಾಪಿತ ಹಿತಾಸಕ್ತಿಗಳು ಹಿಜಾಬ್ ಸಮಸ್ಯೆ ಬಗೆಹರಿಸದೇ ಜೀವಂತವಾಗಿ ಇಡಲು ಯತ್ನಿಸುತ್ತಿವೆ. ಕಾನೂನಿಗೆ ಗೌರವ ಕೊಡದೇ ತಮ್ಮ ವ್ಯಕ್ತಿತ್ವ ಪ್ರದರ್ಶಿಸ್ತಾ ಇದ್ದಾರೆ. ಭಾರತ ದೇಶದ ಕಾನೂನು, ಸಂಸ್ಕೃತಿ ಮತ್ತು ಸೌಂದರ್ಯ ನಮಗೆ ಗೊತ್ತಾಗಬೇಕಾದರೆ ಅಂಥವರು ಪಾಕಿಸ್ತಾನ ಅಥವಾ ಸೌದಿಗೆ ಹೋದ್ರೆ ಈ ದೇಶದ ಸಂಸ್ಕೃತಿ ನಮಗೆ ತಿಳಿಯುತ್ತೆ ಅಂತ ಹೇಳಿದ್ದೆ. ಇದು ಸಮಸ್ಯೆ ಸೃಷ್ಟಿಸುವವರಿಗೆ ಮಾತ್ರ ಸೀಮಿತವಾಗಿ ಹೇಳಿದ್ದ ವಿಚಾರವಾಗಿದೆ ಎಂದು ಮಾಜಿ ಸಚಿವರು ವಿವರಿಸಿದ್ದಾರೆ..

ಶಾಂತಿ, ಸಹೋದರತೆ, ಸಾಮರಸ್ಯ ಮುಖ್ಯ
ಕೆಲ ಸ್ಥಾಪಿತ ಹಿತಾಸಕ್ತಿಗಳ ಉದ್ದೇಶ ಈಡೇರಿಕೆಗೆ ವಿದ್ಯಾರ್ಥಿನಿಯರು ಬಲಿಯಾಗಬಾರದು. ಶಾಂತಿ, ಸಹೋದರತೆ, ಸಾಮರಸ್ಯ ಮುಖ್ಯವಾಗಿದೆ. ಇದಕ್ಕಾಗಿ ಎಲ್ಲರೂ ಕಾನೂನು ಪಾಲಿಸಬೇಕು. ಕಾನೂನು ವ್ಯಾಪ್ತಿ ಯಲ್ಲಿರುವಾಗ ಅನ್ಯಾಯವಾದ್ರೆ ಸಂಬಂದಪಟ್ಟವರ ಬಳಿ ನ್ಯಾಯ ಕೇಳಬೇಕು. ಆದರೆ ಇವರು ಕಾನೂನು ಪಾಲಿಸಲ್ಲ, ನ್ಯಾಯಾಲಯಕ್ಕೆ ಹೋಗಲ್ಲ. ಸಂಬಂಧಪಟ್ಟವರ ಮಾತು ಕೇಳಲ್ಲ. ಕೆಲವೇ ಕೆಲವರು ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ನಾನು ನೀಡಿದ ಹೇಳಿಕೆಗೆ ಎಲ್ಲರೂ ಮೆಚ್ವಿದ್ದಾರೆ. ನಮ್ಮ ಮನಸ್ಸಿನಲ್ಲಿರುವ ಭಾವನೆ ಹೇಳಿದ್ದಿರಿ ಎಂದು ಎಲ್ಲರೂ ಮೆಚ್ಚಿದ್ದಾರೆ. ಒಂದಿಬ್ಬರು ಸೃಷ್ಟಿಸುವ ಸಮಸ್ಯೆಯಿಂದ ಎಲ್ಲರಿಗೂ ಅವಮಾನ ಆಗುವ ರೀತಿ ಆಗಬಾರದು. ವಿದ್ಯಾರ್ಥಿನಿಯರ ತಂದೆ ತಾಯಿ ಮೌನವಾಗಿ ಕೂತಿರುವುದೆ ಸಮಸ್ಯೆಯಾಗಿದೆ. ತಂದೆ ತಾಯಿ ಮುಂದೆ ಬಂದು ಶಿಕ್ಷಣಕ್ಕೆ ಒತ್ತು ಕೊಡಬೇಕು. ಶಿಕ್ಷಣಕ್ಕೆ ಯಾವುದೇ ಅಡ್ಡಿ ಬರಬಾರದು ಎಂದು ಧಾರ್ಮಿಕ ಮುಖಂಡರು ಹೇಳಿದ್ದಾರೆ. ಸಮಸ್ಯೆ ಬಂದಾಗ ಸಂಧಾನದ ಮೂಲಕ ಹೋಗಬೇಕು. ಸಂಧಾನ ಆಗದಿದ್ರೆ ಕಾನೂನು ಹೋರಾಟ ಮಾಡಬೇಕು.ಇದನ್ನು ಹೊರತುಪಡಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಬಾರದು ಅಂತಾ ಯುಟಿ ಖಾದರ್ ಹೇಳಿದ್ದಾರೆ.

24 ವಿದ್ಯಾರ್ಥಿನಿಯರು ಸಸ್ಪೆಂಡ್
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪುತ್ತೂರು ಶಾಸಕ, ಉಪ್ಪಿನಂಗಡಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು, ಹಿಜಾಬ್ ಹೆಸರಿನಲ್ಲಿ ಮತೀಯ ಸಂಘಟನೆಗಳು ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಹೈಕೋರ್ಟ್ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮವಾಗಲಿದೆ. ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಲಾಗಿದೆ.
ಮುಂದೆಯೂ ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು ಅಂತಾ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರಿಗೆ ಪಾಠ ಮುಖ್ಯವೋ, ಧಾರ್ಮಿಕತೆ ಮುಖ್ಯವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಧಾರ್ಮಿಕತೆ ಮುಖ್ಯವಾದಲ್ಲಿ ಕಾಲೇಜಿನಿಂದ ಹೊರ ನಡೆಯೋದು ಉತ್ತಮ. ಧಾರ್ಮಿಕತೆಗೆ ಅವಕಾಶ ಇರುವಲ್ಲಿ ಶಿಕ್ಷಣ ಪಡೆಯಲಿ. ಕಾಂಗ್ರೆಸ್ ಮುಖಂಡ ಯು.ಟಿ. ಖಾದರ್ ಹಿಜಾಬ್ ಕುರಿತ ವಾಸ್ತವಿಕತೆಯನ್ನು ಹೇಳಿದ್ದಾರೆ..ಓರ್ವ ಮುಸ್ಲಿಂ ಮುಖಂಡನ ಮಾತನ್ನು ವಿದ್ಯಾರ್ಥಿಗಳು ಒಪ್ಪಿಕೊಳ್ಳಬೇಕು. ವಿದ್ಯಾರ್ಥಿಗಳ ಬೇಜಾವ ಬ್ದಾರಿಯ ನಡೆಯನ್ನು ಇನ್ನು ಸಹಿಸುವುದಿಲ್ಲ. ಸರಕಾರಿ ಕಾಲೇಜು ಸರ್ವ ಧರ್ಮೀಯರಿಗೆ ಪಾಠ, ಪ್ರವಚನ ನೀಡುವ ಕೇಂದ್ರಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುವುದು ಅಂತಾ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಆರೋಪಿಗಳ ಮೇಲೆ ಸೂಕ್ತ ಕ್ರಮ
ಇನ್ನು ಕಾಲೇಜಿಗೆ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ ಬಗ್ಗೆ ಮಾತನಾಡಿದ ಮಠಂದೂರು, ಈ ಸಂಬಂಧ ಈಗಾಗಲೇ ಎಫ್.ಐ.ಆರ್ ದಾಖಲಾಗಿದೆ. ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಎಸ್.ಪಿ ಮತ್ತು ಡಿವೈಎಸ್ಪಿ ಗೆ ಸೂಚಿಸಿದ್ದೇನೆ. ಪತ್ರಕರ್ತರು ಈಗಾಗಲೇ ಮನವಿ ಮತ್ತು ಪ್ರತಿಭಟನೆಯನ್ನೂ ಮಾಡಿದ್ದಾರೆ. ಗೃಹಸಚಿವರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಭರವಸೆಯನ್ನೂ ನೀಡಿದ್ದಾರೆ ಅಂತಾ ಶಾಸಕ ಸಂಜೀವ ಮಠಂದೂರು ಅಂತಾ ಹೇಳಿದ್ದಾರೆ.
ಇನ್ನು ಮಂಗಳೂರು ವಿಶ್ವವಿದ್ಯಾನಿಲಯದ 15 ಮಂದಿ ಹಿಜಬ್ ವಿದ್ಯಾರ್ಥಿನಿಯರಿಗೂ ಬುಧವಾರ ದೊಳಗೆ ನೋಟಿಸ್ ಗೆ ಉತ್ತರ ನೀಡಲು ಹೇಳಿದ್ದು, ಉತ್ತರ ನೀಡದಿದ್ದರೆ ಕಾಲೇಜಿನಿಂದ ಅಮಾನತು ಆಗುವ ಸಾಧ್ಯತೆಗಳಿವೆ. ಹಿಜಾಬ್ ಪ್ರತಿಭಟನೆಯಿಂದಾಗಿ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ರಜೆ ಘೋಷಿಸಬೇಕೆ ಎಂದಾಗಲೂ ಬೇಡ ಎಂದಿದ್ದೇವೆ. ಕಾಲೇಜಿಗೆ ರಜೆ ನೀಡಿದಲ್ಲಿ ವಿದ್ಯಾರ್ಥಿಗಳು ಪಾಠ, ಪ್ರವಚನಗಳಿಗಿಂತ ದೂರ ಉಳಿಯುವಂತಾಗುತ್ತದೆ. ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಲ್ಲಿ ಸೆಮಿಸ್ಟರ್ ಪರೀಕ್ಷೆಯೂ ಬರಲಿದೆ. ಈ ಕಾರಣಕ್ಕಾಗಿ ಕಾಲೇಜಿಗೆ ರಜೆ ಘೋಷಿಸಿಲ್ಲ. ವಿದ್ಯಾರ್ಥಿಗಳ ತರಗತಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಹೇಳಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಲ್ಲಿ ಹಿಜಾಬ್ ಸಮಸ್ಯೆ ಜಟಿಲ ಹೋಗುತ್ತಿದ್ದು ,ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಇತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡಬೇಕಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಯಾರು ಮಾಡಿದರೆಂದರೆ ಆರ್ ಎಸ್ ಎಸ್ ಮಾಡಿದೆ ಎಂದು ಹೇಳೋಕೆ ಆಗೋಲ್ಲ. ಯಾಕಂದರೆ ಅದೊಂದು ರಿಜಿಸ್ಟ್ರೆಡ್ ಸಂಘವಲ್ಲ ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications