ಉಪ್ಪಿನಂಗಡಿ: ಟ್ಯಾಂಕರ್ ಡಿಕ್ಕಿ-ಶಾಲಾ ಬಾಲಕ ದುರ್ಮರಣ
ಪುತ್ತೂರು, ಜು.7: ಬುಲೆಟ್ ಟ್ಯಾಂಕರೊಂದು ಢಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಸಮೀಪದ ಹಿರ್ತಡ್ಕ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಉಪ್ಪಿನಂಗಡಿ ಗ್ರಾಮದ ಮಠ ಸಮೀಪದ ಹಿರ್ತಡ್ಕ ನಿವಾಸಿ ಅಶ್ರಫ್ ಎಂಬವರ ಪುತ್ರ ಹಿರ್ತಡ್ಕ ಸರಕಾರಿ ಹಿ.ಪ್ರಾ.ಶಾಲೆಯ 3ನೇ ತರಗತಿ ವಿದ್ಯಾರ್ಥಿ ಅಸ್ಲಾಂ(10)ಮೃತ ಬಾಲಕ.
ಮನೆಯ ಸಮೀಪದ ಆಟದ ಮೈದಾನಕ್ಕೆ ಹೋಗಲು ಅಸ್ಲಾಂ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ದಾಟುತ್ತಿದ್ದ ವೇಳೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿ ಬುಲೆಟ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾಲಕ ಮೃತಪಟ್ಟ ಸುದ್ದಿ ಕೇಳಿ ಜಮಾಯಿಸಿದ ಜನ ಟ್ಯಾಂಕರ್ ಚಾಲಕ ವೇಲುಸ್ವಾಮಿ ಹಾಗೂ ಕ್ಲೀನರ್ ಮೇಲೆ ಹಲ್ಲೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಚಾಲಕ ವೇಲುಸ್ವಾಮಿ, ಕ್ಲೀನರ್ ಹಾಗೂ ಟ್ಯಾಂಕರ್ ವಶಪಡಿಸಿಕೊಂಡು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಪುತ್ತೂರು ಸಂಚಾರಿ ಠಾಣೆ ಎಸ್‍ಐ ರಕ್ಷಿತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿತ್ತು.












Click it and Unblock the Notifications