ಮಂಗಳೂರಿನ ವಿವಿಧೆಡೆ ರಾಷ್ಟ್ರೀಯ ಏಕತಾ ಓಟ: ಯಾರೆಲ್ಲಾ ಭಾಗವಹಿಸಿದ್ದರು?
ಮಂಗಳೂರು, ಅಕ್ಟೋಬರ್. 31: ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ ಅಂಗವಾಗಿ ನಡೆಯುವ ರಾಷ್ಟ್ರೀಯ ಏಕತಾ ಓಟವನ್ನು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಬುಧವಾರ ಆಯೋಜಿಸಲಾಗಿತ್ತು.
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ , ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಸುಳ್ಯದಲ್ಲಿ ಕೂಡ ಏಕತಾ ಓಟ ನಡೆಯಿತು. ಪುತ್ತೂರಿನಲ್ಲಿ ಆಯೋಜಿಸಲಾಗಿದ್ದ ಏಕತಾ ಓಟ ಪುತ್ತೂರು ಅಂಜನೇಯ ಮಂತ್ರಾಲಯದಿಂದ ದರ್ಬೆ ವೃತ್ತದವರೆಗೆ ಸಾಗಿತು. ಓಟದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಶಾಸಕ ಸಂಜೀವ ಮಠಂದೂರು ಓಟಕ್ಕೆ ಚಾಲನೆ ನೀಡಿದರು.

ನಗರದ ಕದ್ರಿಯಲ್ಲಿ ಆಯೋಜಿಸಲಾಗಿದ್ದ ಏಕತೆಗಾಗಿ ಓಟದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಏಕತಾ ಓಟವನ್ನು ಮುಖಂಡರಾದ ಟಿ.ಜಿ. ರಾಜಾರಾಂ ಭಟ್ ಉದ್ಘಾಟಿಸಿದರು. ಎರಡೂ ಕಾಲುಗಳಲ್ಲೂ ಬಲವಿಲ್ಲದಿದ್ದರೂ ಎರಡು ಕಿ.ಮೀ. ಏಕತಾ ಓಟದಲ್ಲಿ ನರಿಂಗಾನ ಪಡ್ಪುವಿನ ಪಿ.ಇಬ್ರಾಹಿಂ ಪಾಲ್ಗೊಂಡರು.

ಮಂಗಳೂರು ಉತ್ತರ ಕ್ಷೇತ್ರ ಸುರತ್ಕಲ್ ನಲ್ಲಿ ಕೂಡ ಇಂದು ಏಕತಾ ಓಟ ಆಯೋಜಿಸಲಾಗಿತ್ತು. ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಮತ್ತಿತರರು ಓಟದಲ್ಲಿ ಪಾಲ್ಗೊಂಡರು. ಬೆಳ್ತಂಗಡಿ, ಸುಳ್ಯದಲ್ಲೂ ಬಿಜೆಪಿ ವತಿಯಿಂದ ಏಕತಾ ಓಟ ಆಯೋಜಿಸಿದ್ದರು.












Click it and Unblock the Notifications