ಕೇಂದ್ರ ಬಜೆಟ್; ಕರಾವಳಿ ಮೀನುಗಾರರಲ್ಲಿ ಹೆಚ್ಚಾದ ನಿರೀಕ್ಷೆ
ಮಂಗಳೂರು, ಜನವರಿ 31: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ವಾರ್ಷಿಕ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ ಜನಸಾಮಾನ್ಯರು, ಹಲವು ಉದ್ದಿಮೆಗಳು ಕೇಂದ್ರದ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಕರಾವಳಿಯ ಆರ್ಥಿಕತೆಯ ಜೀವನಾಡಿ ಅಂತಾನೇ ಕರೆಸಿಕೊಂಡಿರುವ ಮತ್ಸೋದ್ಯಮ ಕೇಂದ್ರ ಬಜೆಟ್ ಮೇಲೆ ಅಪಾರ ಭರವಸೆಯನ್ನಿಟ್ಟುಕೊಂಡಿದೆ.
ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಮೀನುಗಾರಿಕೆ, ಸಮುದ್ರ ಉತ್ಪನ್ನಗಳನ್ನು ಬೆಳೆಸುವ ಬಗ್ಗೆ ಪ್ರೋತ್ಸಾಹ ನೀಡುವ ಬಗ್ಗೆ ಅಪಾರ ನಿರೀಕ್ಷೆ ಬೋಟ್ ಮಾಲೀಕರದ್ದಾಗಿದೆ.
ಮೀನುಗಾರಿಕೆಯ ಜೊತೆಗೆ ಮೀನುಗಾರಿಕಾ ಬಂದರನ್ನೂ ಸ್ವಚ್ಛ ಮತ್ತು ಸುಂದರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆ ತರಬೇಕೆನ್ನುವುದು ಮೀನುಗಾರರ ಅಭಿಪ್ರಾಯವಾಗಿದೆ. ಪ್ರತಿದಿನ ಟನ್‌ಗಟ್ಟಲೆ ಮೀನುಗಳು ಸಮುದ್ರದಲ್ಲಿ ಬೇಟೆಯಾಗಿ ದಡಕ್ಕೆ ಬಂದು ಬೀಳುತ್ತಿದ್ದು, ಇದರ ಹರಾಜು ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕಿದೆ.

ಬಂದರಿನಲ್ಲಿ ರಾಶಿ ರಾಶಿ ಮೀನುಗಳು ಬಂದು ಸೇರುವುದರಿಂದ ಬಂದರು ಸ್ವಚ್ಛವಾಗಿಡುವುದು ಬಂದರಿನ ನೇತೃತ್ವ ವಹಿಸಿಕೊಂಡಿರುವ ಇಲಾಖೆಯಿಂದ ಅಸಾಧ್ಯ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಸಿಟಿ ತರಹವೇ ಸ್ಮಾರ್ಟ್ ಬಂದರು ನಿರ್ಮಾಣದ ಕುರಿತು ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕೆಂದು ಮಂಗಳೂರು ಮೀನುಗಾರಿಕಾ ಬಂದರಿನ ಬೋಟ್ ಮಾಲೀಕ ರಾಜರತ್ನ ಸನಿಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾಕೆಂದರೆ ಮೀನುಗಳ ಮೇಲೆ ಹುಳ ಹುಪ್ಪಟೆಗಳು ಕೂತಾಗ ಜನರಲ್ಲಿ ಮೀನುಗಳು ಗಲೀಜಾಗಿವೆ ಎಂಬ ಅಭಿಪ್ರಾಯ ಮೂಡುತ್ತದೆ. ವಿದೇಶದವರೂ ಮಂಗಳೂರು ಪ್ರವಾಸಕ್ಕೆ ಬಂದಾಗ ಮೀನುಗಾರಿಕಾ ಬಂದರಿಗೆ ಬರುತ್ತಾರೆ. ಈ ವೇಳೆ ತಿನ್ನುವ ಆಹಾರದ ಪ್ರದೇಶ ಗಲೀಜಾಗಿದೆ ಎಂಬ ಅಭಿಪ್ರಾಯ ಅವರಲ್ಲೂ ಮೂಡುತ್ತಿದೆ. ಮಂಗಳೂರಿನ ಮೀನುಗಳೂ ವಿದೇಶಕ್ಕೆ ರಪ್ತಾಗುತ್ತದೆ. ಆ ಮೀನು ಮಾರಾಟದ ಮೇಲೂ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಅನ್ನುವುದು ಮೀನುಗಾರಿಕಾ ಬೋಟ್ ಮಾಲೀಕ ರಾಜರತ್ನ ಸನಿಲ್ ಅವರ ಅಭಿಪ್ರಾಯವಾಗಿದೆ.

ಮೀನುಗಾರಿಕಾ ಬೋಟ್‌ಗಳು ತಯಾರಾಗಬೇಕಾದರೆ ಸುಮಾರು ಒಂದು ಕೋಟಿ ರೂಪಾಯಿ ಖರ್ಚು ವೆಚ್ಚಗಳು ಆಗುತ್ತದೆ. ಆದರೆ ಸರ್ಕಾರ ಈ ಬೋಟ್ ಖರೀದಿಗೆ ನೀಡುವ ಸಾಲ ಸೌಲಭ್ಯದಲ್ಲಿ ಬಡ್ಡಿದರವನ್ನು ಕಡಿತಗೊಳಿಸಬೇಕು. ಪ್ರಸ್ತುತ ಆರ್ಥಿಕವಾಗಿ ಸ್ಥಿತಿವಂತರು ಮಾತ್ರ ಬೋಟ್ ಖರೀದಿ ಮಾಡುವ, ಮೀನುಗಾರಿಕಾ ಉದ್ಯಮದಲ್ಲಿ ತೊಡಗಿಕೊಳ್ಳುವ ಸಾಹಸವನ್ನು ಮಾಡುತ್ತಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಸರ್ಕಾರ ನೀಡಿದರೆ ಯುವ ಜನರಿಗೂ ಪ್ರೋತ್ಸಾಹ ನೀಡಿದಂತೆ ಆಗುತ್ತಿದೆ ಅನ್ನುವುದು ಮೀನುಗಾರರ ಅಭಿಪ್ರಾಯವಾಗಿದೆ.
ಮತ್ಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಸಿಹಿ ನೀರು ಮೀನುಗಾರಿಕೆಗೂ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರೂ, ಅದರ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಸಿಹಿನೀರು ಮೀನುಗಾರಿಕೆ ನಡೆಸುವ ಬಗ್ಗೆ ಸರಿಯಾದ ತರಬೇತಿ ದೊರಕುವಂತಾಗಬೇಕು. ಒಂದು ಲಕ್ಷ ಮೀನು ಮರಿಗಳ ಬಿತ್ತನೆ ಮಾಡಿದ ಸರಿಯಾಗಿ ಐವತ್ತು ಸಾವಿರ ಮರಿಗಳೂ ಬದುಕುತ್ತಿಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ.

Recommended Video
ಕೇಂದ್ರ ಸರ್ಕಾರ ಮೀನುಗಾರರ ಒತ್ತಾಯಕ್ಕೆ ಮಣಿದು ಕೇಂದ್ರದಲ್ಲಿ ಮತ್ಸ್ಯ ಸಚಿವಾಲಯ ಮಾಡಿದೆ. ಆದರೆ ಅದರ ಪ್ರಯೋಜನ ಇನ್ನೂ ಕರಾವಳಿಯ ಕಡಲ ತೀರಕ್ಕೆ ತಲುಪಿಲ್ಲ. ಮತ್ಸ್ಯ ಸಚಿವಾಲಯದಲ್ಲಿ ಮತ್ಸ್ಯೋದ್ಯಮದ ಬಗ್ಗೆ ಅರಿವಿರುವವರನ್ನು ಸಚಿವರನ್ನಾಗಿ ಮಾಡಬೇಕು. ಮೀನುಗಾರರ ಕಷ್ಟಸುಖವನ್ನು ಅರಿತಿರುವವರನ್ನು ಅಧಿಕಾರಿಗಳನ್ನಾಗಿ ನೇಮಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.












Click it and Unblock the Notifications