ವಿಹಾರಕ್ಕೆ ಬಂದವರು ಬೀಚಿನಲ್ಲಿ ಕೊಚ್ಚಿ ಹೋದರು
ಮಂಗಳೂರು, ಮೇ.22: ಉಳ್ಳಾಲದಲ್ಲಿರುವ ಸಯ್ಯದ್ ಮದನಿ ದರ್ಗಾದ ಸಂದರ್ಶನಕ್ಕೆಂದು ಬಂದು ಬಳಿಕ ವಿಹಾರಕ್ಕಾಗಿ ಸಮುದ್ರದ ಬಳಿ ತೆರಳಿದ್ದ ಆಂಧ್ರ ಪ್ರದೇಶ ಮೂಲದ ಕುಟುಂಬವೊಂದರ ಇಬ್ಬರು ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ಸಮುದ್ರದ ಅಲೆಯಲ್ಲಿ ಸಿಲುಕಿದ್ದ ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಬುಧವಾರ (ಮೇ 21) ಸಂಜೆ ಉಳ್ಳಾಲದಲ್ಲಿ ನಡೆದಿದೆ.
ಆಂಧ್ರ ಮೂಲದ ಮುಷ್ತಾಕ್ (15) ಹಾಗೂ ಮೆಹರುನ್ನೀಸ (50) ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದವರು. ಇವರಲ್ಲಿ ಮೆಹರುನ್ನೀಸ ಶವ ಮಾತ್ರ ಪತ್ತೆಯಾಗಿದ್ದು, ಮುಷ್ತಾಕ್ ಶವಕ್ಕಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಇವರೊಂದಿಗಿದ್ದ ಶಕೀಲಾ ಬಾನು (45) ಮುನ್ನಿ (35) ಹಾಗೂ ಕೈರುನ್ನೀಸಾ (36) ಅವರು ಅಲೆಯ ಸೆಳೆತಕ್ಕೆ ಸಿಲುಕಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ದರ್ಗಾಕ್ಕೆ ಬಂದವರು: ಆಂಧ್ರ ಮೂಲದ ನಾಲ್ಕು ಕುಟುಂಬದ ಸುಮಾರು 25 ಮಂದಿ ಸದಸ್ಯರು ಮೂರು ವಾಹನದಲ್ಲಿ ಉಳ್ಳಾಲ ಸಯ್ಯದ್ ಮದನಿ ದರ್ಗಾದ ದರ್ಶನಕ್ಕೆ ಬುಧವಾರ ಸಂಜೆ ಬಂದಿದ್ದರು. ಸಂಜೆ ಝಿಯಾರತ್ ಮುಗಿಸಿ ಬಳಿಕ ಉಳ್ಳಾಲ ಮೊಗವೀರಪಟ್ಟಣದ ಬೀಚ್‌ಗೆ ತೆರಳಿದ್ದರು.
ಮುಂಗಾರು ಆಗಮನ ಹತ್ತಿರವಾಗುತ್ತಿರುವುದರಿಂದ ಕಡಲದ ಅಬ್ಬರ ಅಧಿಕವಾಗಿತ್ತು. ಹಾಗಿದ್ದರೂ ಮುಷ್ತಾಕ್, ಮೆಹರುನ್ನೀಸ ಸೇರಿದಂತೆ ಐದು ಮಂದಿ ನೀರಿಗೆ ಇಳಿದಿದ್ದರು. ಅದೇ ಸಮಯಕ್ಕೆ ಜೋರಾಗಿ ಬೀಸಿದ ಸಮುದ್ರದ ಅಲೆಗೆ ಐವರು ಸಮುದ್ರ ಪಾಲಾದರು. ಐವರು ನೀರುಪಾಲಾಗಿದ್ದನ್ನು ಕಂಡ ಕುಟುಂಬದ ಉಳಿದ ಸದಸ್ಯರು ರಕ್ಷಣೆಗಾಗಿ ಕೂಗುತ್ತಿದ್ದರು.
ತಕ್ಷಣ ಮಾಹಿತಿ ಪಡೆದ ಸ್ಥಳೀಯ ಈಜುಗಾರರು ನೀರಿಗೆ ಬಿದ್ದಿದ್ದ ನಾಲ್ವರನ್ನು ಮೇಲಕ್ಕೆತ್ತಿದರು. ಆದರೆ ಮೆಹರುನ್ನೀಸ ಎನ್ನುವವರು ಆಗಲೇ ಮೃತಪಟ್ಟಿದ್ದರು. ಸಮುದ್ರದ ಅಲೆಗೆ ಕೊಚ್ಚಿ ಹೋಗಿರುವ ಮುಶ್ತಾಕ್ ಎನ್ನುವ ಹುಡುಗನ ಶವ ನಾಪತ್ತೆಯಾಗಿದ್ದು, ಶವವನ್ನು ಪತ್ತೆ ಹಚ್ಚಲು ಸ್ಥಳೀಯರು ತೀವ್ರ ಪ್ರಯತ್ನ ನಡೆಸಿದರೂ ಇದುವರೆಗೂ ಪ್ರಯೋಜನವಾಗಲಿಲ್ಲ.
ಮೃತ ಮೆಹರುನ್ನೀಸ ಅವರ ಶವವನ್ನು ನಗರದ ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಸಮುದ್ರಪಾಲಾದ ಹುಡುಗನ ಶೋಧ ಕಾರ್ಯಾಚರಣೆ ಮುಂದುವರಿದಿದೆ. ವಿಷಯ ತಿಳಿದ ಆರೋಗ್ಯ ಸಚಿವ ಯುಟಿ ಖಾದರ್ ಸ್ಥಳಕ್ಕೆ ಭೇಟಿ ನೀಡಿದರಲ್ಲದೆ, ಇಬ್ಬರನ್ನು ಕಳೆದುಕೊಂಡ ಆಂಧ್ರದ ಪ್ರವಾಸಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಘಟನೆಯ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications