ನಟ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು
ಮಂಗಳೂರು, ಅಕ್ಟೋಬರ್ 26: ತುಳು ನಟ ಸುರೇಂದ್ರ ಬಂಟ್ವಾಳ್ ಹತ್ಯೆಗೆ ಸಂಬಂಧಿಸಿದ ಪ್ರಕರಣ ಮತ್ತೊಂದು ಆಯಾಮ ಪಡೆದುಕೊಂಡಿದೆ. ಒಂದು ಕೋಟಿ ರೂಪಾಯಿ ಹಣ ದೋಚುವುದಕ್ಕಾಗಿ ಈ ಕೊಲೆ ಮಾಡಲಾಗಿದೆ ಎಂದು ಸುರೇಂದ್ರ ಅವರ ಕುಟುಂಬದವರು ಆರೋಪಿಸಿದ್ದಾರೆ.
ನಟ ಸುರೇಂದ್ರ ಬಂಟ್ವಾಳ್, ಅ.21ರಂದು ಬಂಟ್ವಾಳದ ಬಿ.ಸಿ.ರೋಡ್ ನಲ್ಲಿನ ಅವರ ಫ್ಲಾಟ್ ನಲ್ಲಿ ಕೊಲೆಯಾಗಿದ್ದರು. ಹಣಕಾಸಿನ ವಿಚಾರವಾಗಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತಗೊಂಡಿತ್ತು. ಅ.23ರಂದು ಸುರೇಂದ್ರ ಜೊತೆಗಿದ್ದ ಸತೀಶ್ ಕುಲಾಲ್, ತಾನೇ ಆತನನ್ನು ಕೊಲೆ ಮಾಡಿದ್ದು ಎಂದು ಹೇಳಿಕೊಂಡಿದ್ದ ಆಡಿಯೋ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದೀಗ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸುರೇಂದ್ರ ಬಳಿ ಇದ್ದ ಒಂದು ಕೋಟಿ ರೂಪಾಯಿ ಹಣ ದೋಚುವುದಕ್ಕಾಗಿ ಈ ಕೊಲೆ ಮಾಡಲಾಗಿದೆ ಎಂದು ಸುರೇಂದ್ರ ತಾಯಿ ರಾಧಾ ಮತ್ತು ಸಹೋದರ ಚಂದ್ರಹಾಸ್ ಆರೋಪ ಮಾಡಿದ್ದಾರೆ.
ಭಂಡರಿಬೆಟ್ಟು ಫ್ಲಾಟ್ ನಲ್ಲಿ ಸುರೇಂದ್ರ ಬಳಿ ಒಂದು ಕೋಟಿ ರೂಪಾಯಿ ನಗದು ಇತ್ತು ಮತ್ತು ಸುಮಾರು ಒಂದು ಕಿಲೋಗ್ರಾಂ ಚಿನ್ನದ ಆಭರಣಗಳಿದ್ದವು. ಅವುಗಳಿಗಾಗಿ ಕೊಲೆ ಮಾಡಲಾಗಿದೆ. ಮೂರು ದಿನಗಳ ಹಿಂದೆಯೇ ಮಗ ತನ್ನ ಫ್ಲಾಟ್ ನಲ್ಲಿದ್ದ ಹಣದ ಬಗ್ಗೆ ಹೇಳಿದ್ದ. ನಗದು ಮತ್ತು ಆಭರಣಗಳಿಗಾಗಿ ಅವನನ್ನು ಕೊಲೆಮಾಡಿದ್ದಾರೆ" ಎಂದು ದೂರಿದ್ದಾರೆ.

ಕೊಲೆ ನಂತರ ಆರೋಪಿಗಳು ನಗದು ಮತ್ತು ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ ನಂತರವೂ ಅವರು ನಮ್ಮ ದೂರು ಸ್ವೀಕರಿಸಲು ಸಿದ್ಧರಿಲ್ಲ. ಆದ್ದರಿಂದ ನಾವು ನಗದು ಮತ್ತು ಆಭರಣಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ" ಎಂದಿದ್ದಾರೆ.
ಈ ಕೊಲೆ ಹಿಂದೆ ಸತೀಶ್ ಕುಲಾಲ್ ಜೊತೆ ಕಾಣದ ಹಲವಾರು ಕೈಗಳು ಕೆಲಸ ಮಾಡಿವೆ ಎಂದು ಆರೋಪಿಸಿದ್ದಾರೆ.












Click it and Unblock the Notifications